ಅದು ಏಷ್ಯಾದ ಎರಡನೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ. ಅಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ಬೀದಿ ದೀಪಗಳು ರಾತ್ರಿ ವೇಳೆ ಬೆಳಗುವುದಿಲ್ಲ. ರಾತ್ರಿ ಆದರೆ ಸಾಕು ಕಳ್ಳರಿಗೆ ಹಬ್ಬವೋ ಹಬ್ಬ. ಬೀದಿ ದೀಪ ಇಲ್ಲದೆ ಲಕ್ಷಾಂತರ ಜನ ಪರದಾಡುತ್ತಿದ್ದಾರೆ. ಅಷ್ಟಕ್ಕೂ ಆ ಪ್ರದೇಶ ಯಾವುದು, ಯಾಕೆ ಪರದಾಟ ಅಂತಿರಾ ಈ ಸ್ಟೋರಿ ಓದಿ…….
ಹೌದು… ಹೀಗೆ ಎತ್ತ ನೋಡಿದರೂ ಕತ್ತಲೂ, ಇರುವ ಒಂದು ಹೊರ ಪೊಲೀಸ್ ಠಾಣೆಗೆ ಹಾಕಿರುವ ಬೀಗ, ಭಯದಲ್ಲಿಯೇ ಗುಂಪು ಗುಂಪಾಗಿ ಹೋಗುತ್ತಿರುವ ಮಹಿಳೆಯರು, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ.
ಯೆಸ್, ಬೆಂಗಳೂರಿಗೆ ಕೇವಲ 25 ಕಿಮೀ ದೂರದಲ್ಲಿ ವಿವಿಧ ಕಂಪನಿಗಳ ದೊಡ್ಡ ಕೈಗಾರಿಕಾ ಪ್ರದೇಶವಿದೆ. ಈ ಕೈಗಾರಿಕಾ ಪ್ರದೇಶವು ಏಷ್ಯಾದ ಎರಡನೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ, ಇಲ್ಲಿ ಬೀದಿ ದೀಪಗಳ ಸಮಸ್ಯೆ ಇದೆ. ಹಿಂದೂಪುರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲೇ ಇದ್ದು, ಮಾರಸಂದ್ರ ಬಳಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಆದರೆ, ರಸ್ತೆಯಲ್ಲಿ ಮಾತ್ರ ಬೀದಿ ದೀಪವಿಲ್ಲ. ಅಲ್ಲದೆ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಬೀದಿ ದೀಪವಿಲ್ಲ. ಬೀದಿ ದೀಪಗಳೆಲ್ಲಾ ಕಿತ್ತು ಕೆಳಗೆ ಬೀಳುವ ಪರಿಸ್ಥಿತಿಯಲ್ಲಿವೆ. ಇಷ್ಟಾದರೂ ಸಹ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು, ಈ ಕೈಗಾರಿಕಾ ಪ್ರದೇಶದಲ್ಲಿ ಅತೀ ಹೆಚ್ಚು ಬೇರೆ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ರಾತ್ರಿ ಆಗುವುದನ್ನೇ ಕಳ್ಳರು ಕಾಯುತ್ತಿರುತ್ತಾರೆ. ಒಂಟಿ ಮಹಿಳೆಯರು ಮೊಬೈಲ್‌ನಲ್ಲಿ ಮಾತನಾಡುವುದನ್ನು ಗಮನಿಸಿ ಮೊಬೈಲ್, ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿ ಆಗುತ್ತಿದ್ದಾರೆ. ಯಾರು ಕಿತ್ತುಕೊಂಡು ಎಲ್ಲಿಗೆ ಹೋದರು ಎಂದು ಗಮನಿಸಲೂ ಕೂಡ ಬೆಳಕಿಲ್ಲ.
ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್ ಹೊರ ಠಾಣೆಯಿದೆ. ಆದರೆ, ಗೇಟ್ ಗೆ ಬೀಗ ಹಾಕಿ, ಪೊಲೀಸ್ ಠಾಣೆಯನ್ನು ಸದಾ ಕಾಲ ಮುಚ್ಚೇ ಇರುತ್ತಾರೆ. ಹಾಗಾಗಿ ಕಳ್ಳ ಕಾಕರಿಗೆ ಪೊಲೀಸರು ಎಂದರೆ ಭಯವೇ ಇಲ್ಲದಂತೆ ಅಗಿದೆ. ಇನ್ನು ಕೈಗಾರಿಕಾ ಪ್ರದೇಶದಲ್ಲಿ ಸಿಸಿ ಟಿವಿಗಳ ಅವಶ್ಯಕತೆ ಇದ್ದು, ಬೀದಿ ದೀಪಗಳ ಜೊತೆಯಲ್ಲಿ ಸಿಸಿ ಟಿವಿ ಹಾಕಿದರೆ ಅನುಕೂಲ ಆಗುತ್ತದೆ. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಆಗಿದೆ, ಆದರೆ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮಾತ್ರ ವಿಫಲವಾಗಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.
ಒಟ್ಟಾರೆ ಬೃಹತ್ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳಿಲ್ಲದೇ ಇರುವುದು ವಿಪರ್ಯಾಸ. ಇನ್ನಾದರೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಬೀದಿ ದೀಪಗಳನ್ನು ಹಾಕಿ ಜನರಿಗೆ ಅನುಕೂಲ ಆಗುವಂತೆ ಮಾಡುತ್ತಾರಾ ಕಾದುನೋಡಬೇಕಿದೆ.