ಗ್ರಾಮೀಣ ಜೈವಿಕ ಇಂಧನ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಬಾಬು, ಉಪಾಧ್ಯಕ್ಷರಾಗಿ ಎಂ.ಮುನೇಗೌಡ ಅವರು ಆಯ್ಕೆ ಆಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಕೆ.ನಾರಾಯಣ ಗೌಡ, ಕಾರ್ಯದರ್ಶಿಯಾಗಿ ನಾಗರಾಜು, ನಿರ್ದೇಶಕರುಗಳಾಗಿ ಎಚ್.ನಾರಾಯಣಪ್ಪ, ಎಚ್.ಎ.ನಾಗರಾಜು, ಜಗನ್ನಾಥಚಾರ್, ಕೃಷ್ಣಮೂರ್ತಿ, ಮಂಜುನಾಥ್, ರಾಜ್‌ಕುಮಾರ್, ಎನ್.ಜಗನ್ನಾಥ್, ಭಾಸ್ಕರ್, ಪುರುಷೋತ್ತಮ, ಮುರಳಿಕುಮಾರ್ ಆಯ್ಕೆ ಆಗಿದ್ದಾರೆ.
ನಮ್ಮ ದೇಶದಲ್ಲಿ ಹಸಿರು ಕ್ರಾಂತಿಯಾದ ಸಮಯದಲ್ಲಿ ರೈತರಿಗೆ ಹೊಸ ಹೊಸ ತಳಿಗಳು ಮತ್ತು ತಂತ್ರಜ್ಞಾನಗಳ ಪರಿಚಯ ಮಾಡುವ ಉದ್ದೇಶದಿಂದ ಕೃಷಿ ವಿಜ್ಞಾನ ಕೇಂದ್ರವು 2005ರಲ್ಲಿ ಸ್ಥಾಪನೆಯಾಯಿತು. ಇಂದು ಭಾರತಾದ್ಯಂತ ಪ್ರತಿ ಜಿಲ್ಲೆಗಳಲ್ಲಿಯೂ ಕೃಷಿ ವಿಜ್ಞಾನ ಕೇಂದ್ರಗಳು ಸ್ಥಾಪನೆಯಾಗಿ ರೈತರಿಗೆ ನೆರವಾಗುತ್ತಿವೆ ಎಂದು ಗ್ರಾಮೀಣ ಜೈವಿಕ ಇಂಧನ ಸಂಘದ ಗೌರವ ಅಧ್ಯಕ್ಷರಾಗಿ ಕೆ.ನಾರಾಯಣ ಗೌಡ ಹೇಳಿದರು.
ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಗ್ರಾಮೀಣ ಜೈವಿಕ ಇಂಧನ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಆಯ್ಕೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರಿಗೆ ನೇರವಾಗಿ ತರಕಾರಿಗಳನ್ನು ಮಾರಾಟ ಮಾಡಲು ಹಾಗು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲಾಯಿತು. ಕೃಷಿ ವಿಜ್ಞಾನ ಕೇಂದ್ರಗಳು ಕೇವಲ ವೃತ್ತಿಪರ ತರಬೇತಿಗಳನ್ನು ನೀಡುವುದಕ್ಕಷ್ಟೇ ಸೀಮಿತವಾಗಿಲ್ಲದೆ, ಕೃಷಿಯಾಧಾರಿತ ಪ್ರತಿ ಸಮಸ್ಯೆಗಳಿಗೂ ಕೇಂದ್ರದಿಂದ ಸೂಕ್ತ ಸಲಹೆಗಳನ್ನು ನೀಡಲಾಗುತ್ತಿದೆ ಎಂದರು.
ನಂತರ ನೂತನ ಅಧ್ಯಕ್ಷ ವೆಂಕಟೇಶ್ ಬಾಬು ಮಾತನಾಡಿ, ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯ ಸಾಕಷ್ಟು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಹಾಗೂ ಇಲ್ಲಿ ನೂತನ ತಂತ್ರಜ್ಞಾನ ಮತ್ತು ತಳಿಗಳ ಪರಿಚಯಗಳ ಬಗ್ಗೆ ತರಬೇತಿಗಳನ್ನು ನೀಡುತ್ತಿದೆ. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಪೋಷಕಾಂಶ ನಿರ್ವಹಣೆ ಮತ್ತು ಕೀಟ ಹಾಗು ರೋಗಗಳ ನಿಯಂತ್ರಣ ಮುಂತಾದ ಮಾಹಿತಿಗಳನ್ನು ನೀಡುತ್ತಿದ್ದು, ಇದರಿಂದ ರೈತರಿಗೆ ಬಹಳ ಅನುಕೂಲಕವಾಗಿದೆಯೆಂದು ತಿಳಿಸಿದರು.
ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ. ಹನುಮಂತರಾಯ ಮಾತನಾಡಿ, ಕೃಷಿಯು ಬದಲಾವಣೆಯ ಹಾದಿಯಲ್ಲಿದ್ದು, ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯವು ಶ್ಲಾಘನೀಯವಾದದ್ದು ಹಾಗೂ ನಮ್ಮ ಜಿಲ್ಲೆಯ ಪ್ರಗತಿಪರ ರೈತರು ಇತರ ಜಿಲ್ಲೆಯ ರೈತರಿಗೂ ಮಾದರಿಯಾಗಿದೆ. ಪ್ರತಿ ರೈತರೂ ಕೆವಿಕೆಗಳಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು.