ಕೋಲಾರ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಫೆಬ್ರವರಿ 20 ರಂದು ಬೆಂಗಳೂರಿನ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷ ಎಂ.ಬಿ ನಾಡಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್, ಕ್ಲಕ್, ಡಾಟಾ ಎಂಟ್ರಿ ಆಪರೇಟರ್ ಗಳ ವಿಭಾಗ ಮಟ್ಟದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾ.ಪಂ ನೌಕರರನ್ನು ಸೌಕರ್ಯಗಳಿಂದ ವಂಚಿಸಲಾಗುತ್ತಿದೆ. ಸಕಾಲಕ್ಕೆ ವೇತನ ನೀಡದೆ ಶೋಷಿಸಲಾಗುತ್ತಿದೆ. ಇದರಿಂದ ಅವರ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಸರ್ಕಾರಕ್ಕೆ ಗ್ರಾ.ಪಂ ನೌಕರರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲವಾಗಿದೆ ಕೂಡಲೇ ಸರ್ಕಾರ ನೌಕರರ ಹಿತಕಾಯುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನೌಕರರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಈ ಶೋಷಣೆ ಪ್ರಶ್ನಿಸಿದರೆ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಸುತ್ತಾರೆ. ಕಡಿಮೆ ವೇತನ ನೀಡಿ ಹೆಚ್ಚಿನ ಅವಧಿವರೆಗೆ ಕೆಲಸ ಮಾಡಿಸುತ್ತಿದ್ದಾರೆ ಸುಮಾರು ತಿಂಗಳಿಂದ ವೇತನ ಕೊಟ್ಟಿಲ್ಲ ಅಧಿಕಾರಿಗಳಿಗೆ ನೌಕರರ ಕಷ್ಟದ ಅರಿವಿಲ್ಲ. ವೇತನ ಕೇಳಿದರೆ ಅಧಿಕಾರಿಗಳು ಖಜಾನೆಯಿಂದ ಹಣ ಬಿಡುಗಡೆಯಾಗಿಲ್ಲ ಮತ್ತು ಪಂಚಾಯಿತಿಗೆ ಆದಾಯ ಬರುತ್ತಿಲ್ಲ ಎಂದು ಸಬೂಬು ಹೇಳುತ್ತಾರೆ ಇದರ ವಿರುದ್ದ ಸಿಎಂ ಮನೆ ಮುತ್ತಿಗೆ ಹಾಕಿ ನ್ಯಾಯ ಕೇಳಲಾಗುತ್ತದೆ ಎರಡು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಾತನಾಡಿ ನೌಕರರನ್ನು ಹಗಲಿರುಳು ದುಡಿಸಿಕೊಳ್ಳುವ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸದೆ ಶೋಷಿಸುತ್ತಿದ್ದಾರೆ. ಮೂಲಸೌಕರ್ಯವಿಲ್ಲದೆ ಕಾರ್ಯ ನಿರ್ವಹಿಸಲು ನೌಕರರಿಗೆ ಕಷ್ಟವಾಗಿದೆ. ಅಧಿಕಾರಿಗಳು ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ವೇತನ ನೀಡಿ ನೌಕರರಿಗೆ ವಂಚಿಸುತ್ತಿದ್ದಾರೆ ಕರ ಸಂಗ್ರಹಗಾರ ಹುದ್ದೆಯಿಂದ ಗ್ರೇಡ್–2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿ ನೀಡಲು ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪಿಡಿಒ ಹುದ್ದೆಗೆ ಬಡ್ತಿ ನೀಡಬೇಕು. ಗ್ರೇಡ್–2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಗ್ರಾಮ ಪಂಚಾಯಿತಿ ನೌಕರರು ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನರಿಗೆ ಅನುಕೂಲಕರವಾದ ಯೋಜನೆಗಳನ್ನು ತಲುಪಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ ಅವರ ಬದುಕು ಹಸನಾಗಿಲ್ಲ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ ಆದಾಯಕ್ಕೆ ಅನುಗುಣವಾಗಿ ಹುದ್ದೆಗಳನ್ನು ನಿಗದಿಪಡಿಸಿ ವೇತನ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಮರನಾರಾಯಣ್, ಖಜಾಂಚಿ ಕೇಶವರಾಜ್, ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಪಾಪಣ್ಣ ಸೇರಿದಂತೆ ಎರಡು ಜಿಲ್ಲೆಯ ಪದಾಧಿಕಾರಿಗಳು ತಾಲೂಕು ಅಧ್ಯಕ್ಷ ಕಾರ್ಯದರ್ಶಿಗಳು ಮುಖಂಡರು ಇದ್ದರು.