ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ಫರ್ ಸ್ಥಗಿತ: ರೈತ ವಿರೋಧಿ ಆದೇಶವನ್ನು ರದ್ದು ಪಡಿಸಲು ರೈತ ಸಂಘದಿಂದ ಪ್ರತಿಭಟನೆ

ಕೋಲಾರ: ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ಫರ್ ಸಮೇತ ಉಚಿತ ಮೂಲಸೌಕರ್ಯ ಕಲ್ಪಿಸುವ ಯೋಜನೆಯನ್ನು ಸ್ಥಗಿತಗೊಳಿಸುವ ರೈತ ವಿರೋಧಿ ಆದೇಶವನ್ನು ಕೈಬಿಡಬೇಕೆಂದು ರೈತಸಂಘದಿಂದ ಸಹಾಯಕ ಕಾರ್ಯಪಾಲಕ ಅಭಿಯಂತರ ಮುಖಾಂತರ ಇಂಧನ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ದುಬಾರಿಯಾಗಿರುವ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡುವ ರೈತ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಕೃಷಿ ಎಂಬ ಯುದ್ಧದಲ್ಲಿ ನಿರಂತರವಾಗಿ ಹೋರಾಟ ಮಾಡುವ ಮುಖಾಂತರ ನಷ್ಟದ ದಾರಿ ತುಳಿಯುತ್ತಿರುವ ರೈತರಿಗೆ ವರದಾನವಾಗಬೇಕಿದ್ದ ಸರ್ಕಾರ ಅಕ್ರಮ-ಸಕ್ರಮ ಯೋಜನೆಯ ಅನುದಾನವನ್ನು ಕಡಿತಗೊಳಿಸಿ ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫರ್ ಸಮೇತ ನೀಡುವ ಮೂಲಸೌಕರ್ಯಗಳನ್ನು ರದ್ದು ಮಾಡಲು ಮುಂದಾಗಿರುವುದು ರೈತ ವಿರೋಧಿ ಧೋರಣೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ವಿತರಣಾ ಕಂಪನಿಗಳಿಂದ ನಿಯಮಾನುಸಾರ ಪರವಾನಗಿ ಪಡೆಯದ ಕೃಷಿ ಕೊಳವೆಬಾವಿಗಳ ಅನಧಿಕೃತ ವಿದ್ಯುತ್ ಸಂಪರ್ಕಗಳ ಸಕ್ರಮಕ್ಕಾಗಿ ಸರ್ಕಾರ ಈ ಹಿಂದೆ ಯು.ಎನ್.ಐ.ಪಿ ಯೋಜನೆ ಜಾರಿಗೊಳಿಸಿತ್ತು. ಎಸ್ಕಾಂಗಳು ಈ ಯೋಜನೆಯಡಿ ರೈತರಿಂದ ಆರಂಭಿಕ ಭದ್ರತಾ ಠೇವಣಿ (ಎಂ.ಎಂ.ಡಿ.) ಹಾಗೂ ಮೂಲಸೌಕರ್ಯ ಅಭಿವೃದ್ಧಿ ವೆಚ್ಚವಾಗಿ ಪ್ರತಿ ಕೊಳವೆಬಾವಿಗೆ ಶುಲ್ಕದ ರೂಪದಲ್ಲಿ ೨೪ ಸಾವಿರ ರೂ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದವು. ಈ ಶುಲ್ಕವು ರೈತರಿಗೆ ಆರ್ಥಿಕವಾಗಿ ಹೆಚ್ಚು ಹೊರೆಯಾಗುತ್ತಿರಲಿಲ್ಲ. ಈ ಯೋಜನೆಯನ್ನು ರದ್ದು ಮಾಡಿ ಖಾಸಗಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪ ಮಾಡಿದರು.

ಪ್ರಗತಿಪರ ರೈತ ಆಚಂಪಲ್ಲಿ ಗಂಗಾಧರ್ ಮಾತನಾಡಿ, ಮಾರುಕಟ್ಟೆಯಲ್ಲಿ ಸದ್ಯ 25 ಕೆವಿ ಸಾಮಥ್ರ‍್ಯದ ಟ್ರಾನ್ಸ್ ಫಾರ್ಮರ್ ದರವು ಕನಿಷ್ಟ 70 ಸಾವಿರದಿಂದ 1 ಲಕ್ಷದವರೆಗೆ ಇದೆ. ಕೃಷಿ ಜಮೀನು ಎಷ್ಟೇ ದೂರವಿದ್ದರೂ ರೈತರು ಸ್ವಂತ ಹಣದಲ್ಲಿ ಕಂಬ ಮತ್ತು ತಂತಿ ಹಾಕಿಕೊಳ್ಳಬೇಕಿದೆ. ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿ ಮಾಡಲು ಕನಿಷ್ಟ 3 ಲಕ್ಷರೂ ಬೇಕಾಗುತ್ತದೆ. ಇಷ್ಟು ಖರ್ಚು ಮಾಡುವ ತಾಕತ್ತು ರೈತರಿಗೆ ಇಲ್ಲ. ಇದರಿಂದ ಕೊಳವೆಬಾವಿಯೂ ಬೇಡ, ಕೃಷಿಯೂ ಬೇಡ. ಇರುವ ಜಮೀನನ್ನು ಮಾರಿ ನಗರ ಸೇರಿಕೊಳ್ಳೋಣ ಎಂಬ ನಿರ್ಧಾರ ಕೈಗೊಳ್ಳುವ ಮಟ್ಟಕ್ಕೆ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ಕೂಡಲೇ ರೈತರಿಗೆ ವರದಾನವಾಗಬೇಕಿದ್ದ ಅಕ್ರಮ ಸಕ್ರಮ ಯೋಜನೆಯ ಯು.ಎನ್.ಐ.ಪಿ.ಯನ್ನು ಮುಂದುವರೆಸಿ, ಯಾವುದೇ ಕಾರಣಕ್ಕೂ ಯೋಜನೆಯನ್ನು ಸ್ಥಗಿತಗೊಳಿಸದಂತೆ ಆದೇಶ ಮಾಡಿ ಹಿಂದೆ ಇದ್ದ ನಿಯಮದಂರೆ ಎಸ್ಕಾಂಗಳೇ ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರಂ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮುಖಾಂತರ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕು, ಇಲ್ಲವಾದರೆ ಜಾನುವಾರುಗಳು ಹಾಗೂ ಬೆಳೆಗಳ ಸಮೇತ ಇಂಧನ ಸಚಿವರ ಮನೆ ಮುತ್ತಿಗೆ ಹಾಕುವ ಎಚ್ಚರಿಕೆಯೊಂದಿಗೆ ಮನವಿ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸರ್ಕಾರ ಇಂಧನ ಸಚಿವರು ಹಿರಿಯ ಅಧಿಕಾರಿಗಳಿಗೆ ನೀಡಿರುವ ಸೂಚನೆಯಂತೆ ನಾವು ಅವರ ಆದೇಶವನ್ನು ಪಾಲನೆ ಮಾಡುತ್ತೇವೆ, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ತೆರ್ನಹಳ್ಳಿ ಆಂಜಿನಪ್ಪ, ಸುಪ್ರೀಂಚಲ, ಆಲವಾಟ ಶಿವು, ರಾಜೇಂದ್ರಗೌಡ, ಶೇಖ್ ಷಫೀಉಲ್ಲಾ, ಮುನಿರಾಜು, ಹೆಬ್ಬಣಿ ಆನಂದರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಶಿವಾರೆಡ್ಡಿ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!