
ಭಾರತ ದೇಶದ ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಹೆಚ್ಚು ಪವಿತ್ರವಾದ ಉತ್ಸವಗಳಲ್ಲಿ ಅತಿಮುಖ್ಯವಾದ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಜನವರಿ 13 ರಂದು ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ಜರುಗಲಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಬರೋಬ್ಬರಿ 12 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಬಾರಿ ಜಗತ್ತಿನಾದ್ಯಂತದಿಂದ 40 ಕೋಟಿ ಭಕ್ತರು ಮಹಾ ಕುಂಭಮೇಳಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಮೂರು ಮಹಾನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ ದೇಶದ ಮೂಲೆ ಮೂಲೆಯಿಂದ ಜನ ಮಹಾ ಕುಂಭಮೇಳಕ್ಕೆ ಆಗಮಿಸುತ್ತಾರೆ.
ಪ್ರಮುಖ ಕುಂಭ ಸ್ನಾನದ ದಿನಾಂಕ
ಜನವರಿ 14, 2025ರಂದು ಮಕರ ಸಂಕ್ರಾಂತಿಯ ದಿನ ಮೊದಲ ಶಾಹಿ ಸ್ನಾನ
ಜನವರಿ 29, 2025ರಂದು ಮೌನಿ ಅಮವಾಸ್ಯೆಯ ದಿನ ಎರಡನೇ ಅಮೃತ(ಶಾಹಿ) ಸ್ನಾನ
ಫೆಬ್ರವರಿ 3, 2025ರಂದು ವಸಂತ ಪಂಚಮಿಯ ದಿನ ಮೂರನೇ ಶಾಹಿ ಸ್ನಾನ
ಫೆಬ್ರವರಿ 12, 2025ರಂದು ಮಾಘಿ ಪೂರ್ಣಿಮಾ ಅಂದರೆ ಹುಣ್ಣಿಮೆಯ ದಿನ
ಫೆಬ್ರವರಿ 26, 2025ರಂದು ಮಹಾ ಶಿವರಾತ್ರಿ ಹಾಗೂ ಮಹಾ ಕುಂಭಮೇಳಕ್ಕೆ ತೆರೆ
ಮಕರ ಸಂಕ್ರಾಂತಿ ಪ್ರಯುಕ್ತ ಮಹಾಕುಂಭ ಮೇಳದಲ್ಲಿ ಸಾಧು, ಸಂತರು ಮೊದಲ ಅಮೃತ ಸ್ನಾನದಲ್ಲಿ ಪಾಲ್ಗೊಂಡಿದ್ದರು. ಮಹಾಕುಂಭ ಮೇಳದ ಎರಡನೇ ದಿನ 3.5 ಕೋಟಿ ಭಕ್ತರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಮೊದಲ ಅಮೃತ ಸ್ನಾನ (ಶಾಹಿ ಸ್ನಾನ)ದಲ್ಲಿ ಬಹುತೇಕ ಎಲ್ಲಾ ಅಖಾಡಗಳ ಸಾಧುಗಳು ಪಾಲ್ಗೊಂಡಿದ್ದರು. ಪ್ರತಿಯೊಂದು ಅಖಾಡದ ಸಾಧುಗಳು ಅವರ ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಮಹಾಕುಂಭದ ಮೊದಲ ದಿನ 1.75 ಕೋಟಿ ಮತ್ತು ಎರಡನೇ ದಿನ 3.5 ಕೋಟಿ ಸೇರಿ ಒಟ್ಟು 5.25 ಕೋಟಿ ಜನರು ಎರಡು ದಿನದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಭಕ್ತರ ಮೇಲೆ ಪುಷ್ಪವೃಷ್ಟಿ: ಮಹಾಕುಂಭ ಮೇಳದಲ್ಲಿ
ಪಾಲ್ಗೊಂಡಿರುವ ಭಕ್ತರ ಮೇಲೆ ಉತ್ತರ ಪ್ರದೇಶ ಸರ್ಕಾರ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡುತ್ತಿದೆ. ಅಮೃತಸ್ನಾನ ಮಾಡುವ ಭಕ್ತರ ಮೇಲೆ ಪ್ರತಿ ದಿನ 20 ಕ್ವಿಂಟಾಲ್ ಗುಲಾಬಿ ಹೂವಿನ ದಳಗಳಿಂದ ಪುಷ್ಪವೃಷ್ಟಿ ಮಾಡಲಾಗಿದೆ.