ನಗರದ ರಾಜ್‌ಕುಮಾರ್ ಕಲಾ ಮಂದಿರದಲ್ಲಿ ನಗರಸಭೆಯಿಂದ 2025-26ನೇ ಸಾಲಿನ ಆಯವ್ಯಯ ಕುರಿತ ಸಾರ್ವಜನಿಕ ಸಮಾಲೋಚನ ಸಭೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಸಾರ್ವಜನಿಕರಿಂದ ಸ್ವೀಕರಿಸುವ ಸಲಹೆ ಸೂಚನೆಗಳನ್ನು ಆಯವ್ಯಯದಲ್ಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ನಗರದ ನೈರ್ಮಲ್ಯ, ಪರಿಸರ ಸಂರಕ್ಷಣೆ ಕುರಿತು ನಾಲ್ಕು ವರ್ಷಗಳಿಂದ ನೀಡಿರುವ ಯಾವುದೇ ಸಲಹೆಗಳು ಕಾರ್ಯಗತವಾಗಿಲ್ಲ. ಸಾರ್ವಜನಿಕ ಸಮಾಲೋಚನಾ ಸಭೆ ಹೆಸರಿಗಷ್ಟೇ ನಡೆದಿದೆ ಎಂದು ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ದೂರಿದರು.
ಹಿಂದಿನ ಸಭೆಯಲ್ಲಿ ಅಧ್ಯಕ್ಷರು ಮಂಡಿಸಿದ್ದ ಆಯವ್ಯಯ, ವಿವಿಧ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಹಣ ಹಾಗೂ ಸ್ಥಿತಿಗತಿಗಳ ಬಗ್ಗೆ ನಗರಸಭೆ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ ಮಂಡಿಸಿದರು.
ರಸ್ತೆ ವಿಸ್ತರಣೆಗೆ ಅಡ್ಡಿ ಏನು…?
ನಗರದ ರಸ್ತೆ ವಿಸ್ತರಣೆ ಕುರಿತು ಹಂತ ಹಂತವಾಗಿ ಯೋಜನೆ ರೂಪಿಸಲಾಗುವುದು ಎಂದು ವರದಿಯಲ್ಲಿನ ಅಂಶಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಮಾಜಿ ಅಧ್ಯಕ್ಷ ಕೆ.ಎಂ.ಹನು- ಮಂತರಾಯಪ್ಪ, ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ನಗರಸಭೆಗೆ ಹೊರೆ- ಯಾಗುವುದಿಲ್ಲ. ಇದಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಿಂದೆ ಬಿದ್ದು ಕೆಲಸ ಮಾಡಿಸಬೇಕು. ನಗರದಲ್ಲಿ ರಸ್ತೆ ಸ್ಥಿತಿ ಸರಿಪಡಿಸಲು ಬಜೆಟ್‌ನಲ್ಲಿ ಹಣ ಇಟ್ಟಿದ್ದರೂ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ನಗರಸಭೆಯ ಕಂದಾಯ ವಸೂಲಿ ಚುರುಕುಗೊಳ್ಳಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ, ರಸ್ತೆ ವಿಸ್ತರಣೆಗೆ ಅನಧಿಕೃತವಾಗಿ ಒತ್ತುವರಿ ಮಾಡಿರುವವರನ್ನು ತೆರವು ಮಾಡುವುದು ಕಷ್ಟಸಾಧ್ಯವಲ್ಲ. ನಗರಸಭೆಗೆ ಆದಾಯ ತರುವ ಕಲ್ಯಾಣ ಮಂದಿರಗಳು, ಪೆಟ್ರೋಲ್ ಬಂಕ್‌ಗಳು ಮೊದಲಾದ ವಾಣಿಜ್ಯ ಸಂಕೀರ್ಣಗ ಳಲ್ಲಿ ತೆರಿಗೆ ವಸೂಲಾತಿ, ಘನತ್ಯಾಜ್ಯ ನಿರ್ವಹಣೆ ಶುಲ್ಕಗಳನ್ನು ವಸೂಲಿ ಮಾಡಬೇಕು. ಫ್ಲೆಕ್ಸ್‌ಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ನಗರದ ಸ್ವಚ್ಚತೆ, ಪರಿಸರ, ರಸ್ತೆ ವಿಸ್ತರಣೆ, ಸಿಸಿಟಿವಿ ಅಳವಡಿಕೆ, ಭದ್ರತೆ ಮೊದಲಾದ ವಿಚಾರಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕಿದೆ. ನಗರಸಭೆಗೆ ಬರುವ ಆದಾಯ ಮೂಲಗಳನ್ನು ನಿರ್ಲಕ್ಷಿಸದೇ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ನಗರದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿರುವ ಕಸದ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ನಾಗರಿಕರಿಂದ ನಗರಸಭೆಗೆ ಗ್ರಂಥಾಲಯ, ಆರೋಗ್ಯ, ಸಾರಿಗೆ ಮೊದಲಾದ ಕರವನ್ನು ಕಟ್ಟಿಸಿಕೊಂಡು ಸಂಬಂಧಿಸಿದ ಇಲಾಖೆಗೆ ನೀಡಲಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಕಾರ್ತಿಕ್ ಈಶ್ವರ್, ನಗರದ ರಸ್ತೆಗಳ ದುರಸ್ತಿಗೆ ಅನುದಾನ ಬಂದಿದೆ. ರಸ್ತೆ ವಿಸ್ತರಣೆ ಕುರಿತು ಸರ್ವ ಸದಸ್ಯರ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ನಗರದ ಉದ್ಯಾನಗಳನ್ನು ಸೂಕ್ತವಾಗಿ ನಿರ್ವಹಿಸಲಾಗುವುದು. ನಾಗರಿಕರ ಸಲಹೆ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ವಿವಿಧ ಇಲಾಖೆಗಳು ನಗರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಮನವರಿಕೆ ಮಾಡಲಾಗುವುದು ಎಂದರು.
ನಗರಸಭೆಯ 2024-25ನೇ ಸಾಲಿನ ಆಯವ್ಯಯದಲ್ಲಿ ಆದಾಯ ₹67.21 ಕೋಟಿ ನಿರೀಕ್ಷಿಸಲಾಗಿದ್ದು, ಇದರಲ್ಲಿ ಖರ್ಚು ₹65.66 ಕೋಟಿ. ₹1.55 ಕೋಟಿ ಉಳಿತಾಯ ನಿರೀಕ್ಷಿಸಲಾಗಿದೆ. 2023-24ನೇ ಸಾಲಿನಲ್ಲಿ ₹12.25 ಕೋಟಿ ಉಳಿತಾಯವಾಗಿದೆ. 2024ರ ಡಿಸೆಂಬರ್ ಅಂತ್ಯದವರೆಗೆ ₹39.50ಕೋಟಿ ಕ್ರೋಡೀಕರಣವಾಗಿದ್ದು, ಇದರಲ್ಲಿ ₹29.55ಕೋಟಿ ಖರ್ಚಾಗಿದೆ. ಡಿಸೆಂಬರ್ ಅಂತ್ಯಕ್ಕೆ ಉಳಿಕೆ ₹9.94ಕೋಟಿ ಆಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್. ರವಿಕುಮಾರ್, ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.