ಇಬ್ಬರು ಹೆಚ್ಚುವರಿ ವಿಶೇಷ ಎಸಿಗಳಿಗೆ 1,147 ಹಳೇಯ ಕಂದಾಯ ಪ್ರಕರಣ ವಹಿಸಲಾಗಿತ್ತು: ಇವುಗಳ ಪೈಕಿ ಇತ್ಯರ್ಥವಾಗಿರುವುದು ಕೇವಲ 45 ಪ್ರಕರಣ ಮಾತ್ರ: ಅಧಿಕಾರಿಗಳು ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ: ರೈತರ ಆಕ್ರೋಶ

ದೊಡ್ಡಬಳ್ಳಾಪುರ: ಇಲ್ಲಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಾಕಿ ಇರುವ ಹಳೇಯ ಕಂದಾಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಇಬ್ಬರು ಹೆಚ್ಚುವರಿ ವಿಶೇಷ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಿದ್ದರು ಸಹ ಯಾವುದೇ ಪ್ರಗತಿ ಕಾಣದೆ ಹೆಚ್ಚು ಅಧಿಕಾರಿಗಳು ಇದ್ದೂ ಸಹ ರೈತರ ಪಾಲಿಗೆ ಇಲ್ಲದಂತಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಸೇರಿದಂತೆ ರಾಜ್ಯದ ಇತರೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಹೆಚ್ಚುವರಿ ವಿಶೇಷ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆರು ತಿಂಗಳ ಒಳಗೆ ಸಾಧ್ಯವಾದಷ್ಟು ಹಳೇಯ ಕಂದಾಯ ಪ್ರಕರಣಗಳನ್ನು ಇತ್ಯಾರ್ಥ ಪಡಿಸುವಂತೆ ಸೂಚಲಾಗಿದೆ.

ರೈತರು ವಿನಾಕರಣ ಕಚೇರಿಗಳಿಗೆ ಅಲೆದಾಡುವುದ್ನು ತಪ್ಪಿಸಲು ಕಂದಾಯ ಸಚಿವರು ಹಲವಾರು ಸುಧಾರಣೆಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಆದರೆ, ವಾಸ್ತವದಲ್ಲಿ ಮಾತ್ರ ಜಾರಿಯಾಗುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ಇಬ್ಬರು ಹೆಚ್ಚುವರಿ ವಿಶೇಷ ಉಪವಿಭಾಗಾಧಿಕಾರಿಗಳಿಗೆ 1,147 ಹಳೇಯ ಕಂದಾಯ ಪ್ರಕರಣಗಳನ್ನು ವಹಿಸಲಾಗಿತ್ತು. ಇವುಗಳ ಪೈಕಿ ಇತ್ಯರ್ಥವಾಗಿರುವುದು ಕೇವಲ 45 ಪ್ರಕರಣಗಳು ಮಾತ್ರ.

ಇದೇ ಸಮಯದಲ್ಲಿ ರಾಜ್ಯದ ಇತರೆ ಜಿಲ್ಲೆಗಳಾದ ತುಮಕೂರು ವಿಶೇಷ ಉಪವಿಭಾಗಾಧಿಕಾರಿಗಳಲ್ಲಿ 2,199 ಪ್ರಕರಣಗಳ ಪೈಕಿ 435 ಇತ್ಯರ್ಥವಾಗಿವೆ. ಚಿಕ್ಕಬಳ್ಳಾಪುರ ಉಪವಿಭಾಗದಲ್ಲಿ 373 ಪ್ರಕರಣಗಳ ಪೈಕಿ 108 ಇತ್ಯರ್ಥವಾಗಿವೆ.

ಇದೇ ರೀತಿ ಇತರೆ ಜಿಲ್ಲೆಯ ಹೆಚ್ಚುವರಿ ವಿಶೇಷ ಉಪವಿಭಾಗಾಧಿಕಾರಿಗಳು ಕಾಲ ಮಿತಿಯಲ್ಲಿ ಹಳೇಯ ಕಂದಾಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುತ್ತಿರುವುದು ‘ಕಂದಾಯ ನ್ಯಾಯಾಲಯ ಪ್ರಕರಣ ಮಾನಿಟರಿಂಗ್ ವ್ಯವಸ್ಥೆ’ (ಆರ್.ಸಿ. ಸಿ.ಎಂ.ಸಿ) ಯಲ್ಲಿ ನೋಡಬಹುದಾಗಿದೆ.

‘ನಗರದಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವ ಹೆಚ್ಚುವರಿ ಪ್ರಕರಣಗಳ ಇತ್ಯರ್ಥಕ್ಕೆ ನೇಮಕ ಮಾಡಲಾಗಿರುವ ಇಬ್ಬರು ವಿಶೇಷ ಉಪವಿಭಾಗಾಧಿಕಾರಿಗಳು ಕುಳಿತು ಕೊಳ್ಳಲು ಪ್ರತ್ಯೇಕ ಛೇಂಬರ್,ಪ್ರಕರಣಗಳ ವಿಚಾರಣೆ ನಡೆಸಲು ನ್ಯಾಯಾಲಯ ಸಭಾಂಗಣ, ಪ್ರಕರಣಗಳ ಉಸ್ತುವಾರಿಗೆ ಅಗತ್ಯ ಹೆಚ್ಚುವರಿ ವಿಷಯ ನಿರ್ವಾಹಕರೆ ಇಲ್ಲದಾಗಿದೆ.

ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ವಿಶೇಷ ಉಪವಿಭಾಗಾಧಿಕಾರಿಗಳನ್ನು ಮಾತ್ರ ನೇಮಕ ಮಾಡಿದರೆ ಹೇಗೆ ಎಂದು ಪ್ರಾಂತ ರೈತ ಸಂಘಗದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ ಪ್ರಶ್ನಿಸಿದ್ದಾರೆ.

ಮುಂದಿನ ವಾರದಲ್ಲಿ ಮಂಜೂರಿ ಭೂಮಿಯ ಪೋಡಿ ಆಂದೋಲನಕ್ಕೆ ಚಾಲನೆ ನೀಡುವ ಸಲುವಾಗಿ ದೇವನಹಳ್ಳಿ ತಾಲ್ಲೂಕಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭೇಟಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ವಿಶೇಷ ಉಪವಿಭಾಗಾಧಿಕಾರಿಗಳ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಸಚಿವರ ಗಮನಕ್ಕೆ ತರಲಾಗುವುದು. ಅಲ್ಲದೆ ಇತ್ತೀಚಗಷ್ಟೇ ಕಂದಾಯ ಸಚಿವರು ಇಲ್ಲಿನ ತಾಲ್ಲೂಕು ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಗೆ ದಿಢೀರ್ ಭೇಟಿ ನೀಡಿದ್ದ ಸಮಯದಲ್ಲಿ ಇದ್ದ ಅವ್ಯವಸ್ತೆಯೇ ಈಗಲೂ ಮುಂದುವರಿದೇ ಇದೆ, ವಿನಹ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದು ದೂರಿದ್ದಾರೆ.

ಹೆಚ್ಚುವರಿ ವಿಶೇಷ ಉಪವಿಭಾಗಾಧಿಕಾರಿಗಳು ಕಂದಾಯ ಪ್ರಕರಣಗಳ ಜವಾಬ್ದಾರಿ ವಹಿಸಿಕೊಂಡಿರುವುದೇ ಇನ್ನೂ 3 ತಿಂಗಳ ಹಿಂದೆ. ಪ್ರಕರಣ ಅರ್ಥ ಮಾಡಿಕೊಂಡು, ಅದಕ್ಕೆ ನ್ಯಾಯ ಒದಗಿಸಲು ಕನಿಷ್ಠ 2 ತಿಂಗಳ ಕಾಲವಕಾಶ ಹೊಸ ಅಧಿಕಾರಿಗಳಿಗೆ ನೀಡಬೇಕು. ಆ ನಂತರವಷ್ಟೇ ತೀರ್ಪು ನೀಡಲು ಸಾಧ್ಯವಾಗಲಿದೆ. ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್ ಹೇಳಿದ್ದಾರೆ.

Leave a Reply

Your email address will not be published. Required fields are marked *