ಬೌಲಿಂಗ್ ದಾಳಿಗೆ ಬೆದರಿದ ಡೆಲ್ಲಿ, ತವರಿನಲ್ಲಿ ಆರ್ ಸಿಬಿಗೆ ಭರ್ಜರಿ ಜಯ!

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯಂತೆ ತವರಿನಲ್ಲಿ ಗೆಲುವಿನ ನಗೆ ಬೀರುವ ಜೊತೆಗೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದರು.

ವಾರದ ಕೊನೆಯ ದಿನವಾದ ಶನಿವಾರ ಮಧ್ಯಾಹ್ನದಿಂದಲೇ ಅಭಿಮಾನಿಗಳು ಕ್ರೀಡಾಂಗಣದ ಬಳಿ ಬರಲು ಆರಂಭಿಸಿದರು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಆರಂಭಿಕ ಬ್ಯಾಟ್ಸ್‌ಮನ್ ಗಳು ಶುಭಾರಂಭ ಮಾಡಿದರು.

ಆರಂಭಿಕ ಜೋಡಿ ವಿರಾಟ್ ಕೊಹ್ಲಿ (50) ಹಾಗೂ ನಾಯಕ ಪಾಫ್ ಡುಪ್ಲೆಸಿ (22) ರನ್ ಗಳಿಸುವ ಮೂಲಕ ಭದ್ರ ಬುನಾದಿ ಹಾಕಿದರು, ಮಿಚೆಲ್ ಮಾಷ್೯ ಎಸೆತವನ್ನು ಅರಿಯದೆ ನಾಯಕ ಪಾಫ್ ವಿಕೆಟ್ ಒಪ್ಪಿಸಿದರು.

ನಂತರ ಬಂದ ಲೊಮರ್ (26), ಆಲ್ ರೌಂಡರ್ ಮ್ಯಾಕ್ಸವೆಲ್ (24) ಹಾಗೂ ಶಹಭಜ್ ಅಹಮದ್(20) ರನ್ ಗಳಿಸಿ ತಂಡದ ಮೊತ್ತವನ್ನು 170 ರ ಗಡಿ ದಾಟಿಸಿದರು, ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಮಿಚೆಲ್ ಮಾಷ್೯ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪ್ರವಾಸಿ ಡೆಲ್ಲಿ ತಂಡಕ್ಕೆ ಪಾನೆ೯ಲ್ ಹಾಗೂ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು, ತಂಡದ ಮೊತ್ತ 4 ರನ್ ಗಳಿಸಿದ್ದ ಸಂದರ್ಭದಲ್ಲಿ ಆರಂಭಿಕ ಜೋಡಿ ಪ್ರಥ್ವೀ ಶಾ (0), ಮಿಚೆಲ್ ಮಾಷ್೯ (0), ಯಶ್ ದುಳ್(1) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಇಂತಹ ಸಂದರ್ಭದಲ್ಲಿ ಜೊತೆಯಾದ ನಾಯಕ ವಾರ್ನರ್ (19) ಹಾಗೂ ಕನ್ನಡಿಗ ಮನೀಷ್ ಪಾಂಡೆ (50) ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು, ನಂತರ ಬಂದ ಆಲ್ ರೌಂಡರ್ ಅಕ್ಷರ್ ಪಟೇಲ್ (21), ಅಕೀಮ್ (18) ಆನ್ರೀಚ್ ನೋಕಿಯೋ (23) ರನ್ ಗಳಿಸಿದರೂ ಸಹ 23 ರನ್ ಗಳ ಸೋಲು ಅನುಭವಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಪಾದಾರ್ಪಣೆ ಪಂದ್ಯವಾಡಿದ ಬೌಲರ್ ವಿಜಯ್ ಕುಮಾರ್ ವೈಶಾಖ್ ಮೂರು ವಿಕೆಟ್ ಪಡೆದು ಮಿಂಚಿದರು, ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರು. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *

error: Content is protected !!