ದೇವನಹಳ್ಳಿ : ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದ ಹೊಸ ಬೈಪಾಸ್ ರಸ್ತೆಯ ಸರ್ಕಾರಿ ಹಾಸ್ಟೆಲ್ ಸಮೀಪ ಇಂದು ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದ್ದು, ಇಬ್ಬರು ವೃದ್ಧರು ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡ ಇಬ್ಬರು ವೃದ್ಧರನ್ನ ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.
ಬೂದಿಗೆರೆ ಗ್ರಾಮದ ಹೊಸ ಬೈಪಾಸ್ ರಸ್ತೆಯ ಹಾಸ್ಟೆಲ್ ಸಮೀಪದ ವೃತ್ತದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಈ ಬಗ್ಗೆ KRDCL ಅಧಿಕಾರಿಗಳು ಮತ್ತು ರಸ್ತೆ ಕಾಮಗಾರಿ ಕಂಟ್ರಾಕ್ಟರ್ ಯಾವ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆಕ್ರೋಶಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂರ್ನಾಲ್ಕು ಕಿ.ಮೀ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಯಿತು. ಇಷ್ಟೆಲ್ಲಾ ಆದ್ರೂ ಯಾವೊಬ್ಬ ಅಧಿಕಾರಿ ಸ್ಥಳಕ್ಕೆ ಆಗಮಿಸದೇ ಬೇಜವಾಬ್ದಾರಿತನ ತೋರಿರುವ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೂದಿಗೆರೆ ಕ್ರಾಸ್ ನಿಂದ ಏರ್ಪೋರ್ಟ್ ವರೆಗೂ ನಡೆಸುತ್ತಿರುವ ಕಾಮಗಾರಿಗೆ ಬಳಸುತ್ತಿರುವ ವಾಹನಗಳು ಬಹುತೇಕ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಮಾಡುತ್ತಿವೆ. ಈ ಬಗ್ಗೆ ಯಾವೊಬ್ಬ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ ಇಂದು ಅಪಘಾತಕ್ಕೆ ಕಾರಣ ಎನ್ನಲಾದ ಲಾರಿ ಸಹ ಎಲ್ಲಾ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎನ್ನಲಾಗಿದೆ.