ಖಾಸಗಿ ಕಂಪನಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಜೆ.ಕೆ. ಪೇಂಟ್ಸ್ ಕಾರ್ಖಾನೆ ಬಳಿ ಇಂದು ಮಧ್ಯಾಹ್ನ ನಡೆದಿತ್ತು.
ಮನೋಜ್ (19) ಅಪಘಾತದಲ್ಲಿ ಸಾವನ್ನಪ್ಪಿರುವ ಯುವಕ ಎಂದು ಗುರುತಿಸಲಾಗಿದೆ.
ಮೃತ ಯುವಕ ನಗರದ ಹೊರವಲಯದಲ್ಲಿರುವ ಗೀತಂ ಯೂನಿವರ್ಸಿಟಿಯಲ್ಲಿ ಮೊದಲ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಕ್ರಿಸ್ ಮಸ್ ರಜೆ ಹಿನ್ನೆಲೆ ಅನ್ಯ ಕೆಲಸದ ನಿಮಿತ್ತ ವಿದ್ಯಾರ್ಥಿಗಳು ಹೊರಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಮೃತ ವಿದ್ಯಾರ್ಥಿ ಶವವನ್ನು ದೊಡ್ಡಬಳ್ಳಾಪುರ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಘುನಾಥಪುರದಿಂದ ಬೈಕ್ ಬರುತ್ತಿತ್ತು, ಡಿಕ್ರಾಸ್ ಕಡೆಯಿಂದ ಖಾಸಗಿ ಕಂಪನಿ ಬಸ್ ಆಗಮಿಸುತ್ತಿತ್ತು. ಮೊದಲು ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಬಸ್ಸಿನಡಿ ಬೈಕ್ ಬೀಳುತ್ತದೆ. ಸುಮಾರು 100 ಅಡಿ ದೂರದಷ್ಟು ಬೈಕ್ ನ್ನು ಬಸ್ ಎಳೆದೊಯ್ದಿದೆ. ಈ ವೇಳೆ ಬೈಕ್ ಸವಾರರು ಗಂಭೀರ ಗಾಯಗೊಂಡಿರುತ್ತಾರೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.