ಡಿ.30ಕ್ಕೆ ಚನ್ನರಾಯಪಟ್ಟಣ ರೈತ ಹೋರಾಟಕ್ಕೆ 1000 ದಿನ: ಜಿಲ್ಲೆಯಿಂದ ರೈತರು ಭಾಗವಹಿಸಲು ನಿರ್ಧಾರ

ಕೋಲಾರ; ಡಿಸೆಂಬರ್ 30ಕ್ಕೆ ಸಾವಿರ ದಿನ ಪೂರ್ಣಗೊಳ್ಳುತ್ತಿರುವ ಚನ್ನರಾಯಪಟ್ಟಣ ಭೂಸ್ವಾಧೀನಾ ವಿರೋಧಿ ಹೋರಾಟದ ಪ್ರತಿಭಟನೆಗೆ ಕೋಲಾರ ಜಿಲ್ಲೆಯಿಂದ 200 ಜನ ರೈತರು ಭಾಗವಹಿಸಲು ಗಾಜಲದಿನ್ನೆ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರೈತರ ಕೃಷಿ ಜಮೀನನ್ನು ಕೈಗಾರಿಕೆ, ರಸ್ತೆ, ನಿವೇಶನದ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಂಡು ಸ್ಥಳೀಯ ರೈತ ಮಕ್ಕಳಿಗೆ ಉದ್ಯೋಗ ನೀಡುತ್ತೇವೆಂದು ನಂತರ ಯಾವುದೇ ಕೈಗಾರಿಕೆಗಳನ್ನು ಮಾಡದೆ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು, ಕೃಷಿಯನ್ನೇ ನಂಬಿರುವ ರೈತರ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರಗಳ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಕೃಷಿ ಭೂಮಿಯನ್ನು ಸರ್ಕಾರ ಕೈಗಾರಿಕೆಗೆಂದು ಭೂಸ್ವಾಧೀನ ಮಾಡಿಕೊಂಡು ಅದನ್ನೇ ನಂಬಿರುವ ರೈತರು ನಮ್ಮ ಪ್ರಾಣವನ್ನು ಬೇಕಾದರೂ ನೀಡುತ್ತೇವೆ. ನೀವು ಕೋಟಿ ಕೊಟ್ಟರೂ ನಮ್ಮ ಕೃಷಿ ಭೂಮಿಯನ್ನು ಬಿಡುವುದಿಲ್ಲ ಎಂದು ಹಠ ಹಿಡಿದಿರುವ ರೈತರ ಭೂಸ್ವಾಧೀನ ವಿರೋಧಿ ವೇದಿಕೆಗೆ ಡಿಸೆಂಬರ ೩೦ರಂದು 1000 ದಿನ ಪೂರೈಕೆ ಮಾಡಿ ದೆಹಲಿಯ ಹೋರಾಟವನ್ನು ಹಿಂದಿಕ್ಕುತ್ತಿದೆ. ಇಂತಹ ಐತಿಹಾಸಿಕ ಹೋರಾಟಕ್ಕೆ ಕೋಲಾರ ಜಿಲ್ಲೆಯ ರೈತರು ಸಂಪೂರ್ಣ ಬೆಂಬಲ ಘೋಷಿಸುವ ನಿರ್ಧಾರ ಮಾಡಲಾಗಿದೆ ಎಂದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ನಂತರ ರೈತರನ್ನು ಮರೆತು ಬಹುರಾಷ್ಟ್ರೀಯ ಕಂಪನಿಗಳ ಗುಲಾಮರಂತೆ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ರೈತರೇ ತಕ್ಕಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡುವ ಜೊತೆಗೆ ರೈತರ ಹೋರಾಟವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ನ್ಯಾಯವೇ. ಅಲ್ಲಿನ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸರ್ಕಾರದ ಮೇಲೆ ಒತ್ತಡ ಹಾಕಿ ರೈತರ ನ್ಯಾಯಯುತ ಕೃಷಿ ಭೂಮಿಯನ್ನು ಉಳಿಸಿಕೊಳ್ಳಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.

ಡಿಸೆಂಬರ್ 30ರಂದು ನಡೆಯುವ ರೈತರ ನಡಿಗೆ ಡಿಸಿ ಕಚೇರಿ ಕಡೆಗೆ ಹೋರಾಟದ ಮೂಲಕ ರೈತರನ್ನು ರಕ್ಷಣೆ ಮಾಡಲು ಕೃಷಿ ಭೂಮಿಯನ್ನು ಉಳಿಸುವ ಜೊತೆಗೆ ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಹೋರಾಟಕ್ಕೆ ಬೆಂಬಲವಾಗಿ ಜಿಲ್ಲೆಯ 200 ರೈತರು ಭಾಗವಹಿಸಿ ರೈತಕುಲಕ್ಕೆ ದೇಶದ ಯಾವುದೇ ಭಾಗದಲ್ಲೂ ಅನ್ಯಾಯವಾದರೆ ಅಲ್ಲಿ ಕೋಲಾರ ಜಿಲ್ಲೆಯ ರೈತರು ಇರುತ್ತಾರೆಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಶಿವಾರೆಡ್ಡಿ, ತರ‍್ನಹಳ್ಳಿ ಆಂಜಿನಪ್ಪ, ಯಲ್ಲಣ್ಣ, ಹರೀಶ್, ಸುಪ್ರೀಂ ಚಲ, ಫಾರೂಖ್ ಪಾಷ, ರತ್ನಮ್ಮ, ಶೈಲಜ, ಗೌರಮ್ಮ, ಮುನಿವೆಂಕಟಮ್ಮ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!