
ತಾಲ್ಲೂಕಿನ ಕೆಸ್ತೂರು ಗೇಟ್ ಬಳಿ ಡಿ.11ರಂದು ಹುಣಸೆ ವ್ಯಾಪಾರಿಗಳ ಸೋಗಲ್ಲಿ ಬಂದ ವೃದ್ಧೆಯ ಮಾಂಗಲ್ಯ ಸರ ಎಗರಸಿ ಪರಾರಿಯಾಗಿದ್ದ ಖದೀಮರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ತಾಲೂಕಿನ ಕೆಸ್ತೂರು ಗ್ರಾಮದ 63 ವರ್ಷದ ಸರಸ್ವತಮ್ಮ ಮಾಂಗಲ್ಯ ಸರ ಕಳೆದುಕೊಂಡ ವೃದ್ಧೆ. ಹಸು ಮೇಸಲು ತೆರಳಿದ್ದ ವೇಳೆ ಹುಣಸೆ ಮರ ವ್ಯಾಪಾರಿಗಳು ಎಂಬಂತೆ ಬಂದ ಇಬ್ಬರು ಅಪರಿಚಿತರು ವೃದ್ಧೆಯೊಂದಿಗೆ ಮಾತಿಗಿಳಿದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 52 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಖದೀಮರನ್ನು ಪತ್ತೆಹಚ್ಚುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ
ಡಿ.11ರಂದು ನಾನು ಎಂದಿನಂತೆ ಮಧ್ಯಾಹ್ನ 12ರ ಸುಮಾರಿನಲ್ಲಿ, ಹಸುವನ್ನು ತೋಟಕ್ಕೆ ಬಿಡಲು ಹೋದಾಗ ಇಬ್ಬರು ಬೈಕ್ ನಲ್ಲಿ ಬಂದು, ಒಬ್ಬ ವ್ಯಕ್ತಿ ಬೈಕ್ ಮೇಲೆಯೇ ಕುಳಿತುಕೊಂಡು ಇನ್ನೊಬ್ಬ ವ್ಯಕ್ತಿ ಬೈಕಿನಿಂದ ಇಳಿದು ಬಂದು ಹುಣಸೆ ಮರವನ್ನು ಕೊಡುತ್ತೀರಾ ಎಂದು ಕೇಳಿಕೊಂಡು ನಾನು ಇದ್ದ ಜಾಗಕ್ಕೆ ಬಂದ. ಆಗ ನಾನು ಆಯ್ತು ಮೂರು ಮರಗಳಿವೆ ಕೊಡುತ್ತೇವೆಂದು ಹೇಳುತ್ತಾ ಮುಂದೆ ಹೋಗುತ್ತಿದ್ದೆ, ಆಗ ಆತನು ನನ್ನನ್ನೇ ಹಿಂಬಾಲಿಸಿಕೊಂಡು ಬಂದು ನನ್ನ ಕೊರಳಿನಲ್ಲಿದ್ದ ಮಾಂಗಲ್ಯದ ಚಿನ್ನದ ಸರಕ್ಕೆ ಕೈ ಹಾಕಿ ಮಾಂಗಲ್ಯವನ್ನು ಕಿತ್ತುಕೊಂಡು ಓಡಿ ಹೋಗಿ ಬೈಕ್ ಹತ್ತಿಕೊಂಡು ದೊಡ್ಡಬಳ್ಳಾಪುರ ಕಡೆಗೆ ಪರಾರಿಯಾದರು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ. ಇದೀಗ ಪೊಲೀಸರು ಕಳ್ಳರನ್ನು ಬಂಧಿಸಿ ನನಗೆ ನ್ಯಾಯ ಒದಗಿಸಿದ್ದಾರೆ ಎಂದು ಮಾಂಗಲ್ಯ ಸರ ಕಳೆದುಕೊಂಡಿದ್ದ ಸರಸ್ವತಮ್ಮ ಹೇಳಿದ್ದಾರೆ.