ಜ.5ರಂದು ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ: ಡಿ.20ರಿಂದ ಘಾಟಿ ದನಗಳ ಜಾತ್ರೆ ಪ್ರಾರಂಭ: ರೈತರಿಂದ ಪೂರ್ವ ಸಿದ್ಧತೆ: ದನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ದಿಬ್ಬ, ಶೆಡ್, ಪೆಂಡಾಲ್ ಗಳ ನಿರ್ಮಾಣ

ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವವು ಜನವರಿ 05 ರಂದು ಜರುಗಲಿದೆ. ಇದಕ್ಕೂ ಮುನ್ನ ಡಿ.20ರಿಂದ ದನಗಳ ಜಾತ್ರೆ ಪ್ರಾರಂಭವಾಗಲಿದೆ. ಈಗಾಗಲೇ ಜಾತ್ರೆಗೆ ಬೇಕಾಗಿರುವ ಎಲ್ಲಾ ಸಿದ್ಧತಾ ಕಾರ್ಯಗಳು ಪ್ರಾರಂಭಗೊಂಡಿವೆ.

ಸದ್ಯ ದನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಸ್ಥಳಗಳನ್ನು ಗುರುತಿಸಿಕೊಂಡು ದಿಬ್ಬಗಳ ನಿರ್ಮಾಣ ಮತ್ತು ಶೆಡ್ ಗಳು, ಪೆಂಡಲ್ ನಿರ್ಮಾಣ ಕೆಲಸವನ್ನ ರೈತರು ಪ್ರಾರಂಭಿಸಿದ್ದಾರೆ.

ಮುಂಗಾರಿನಲ್ಲಿ ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಬೆಳೆಗಳ ಕೊಯ್ಲು ಮುಕ್ತಾಯವಾದ ನಂತರ ಪ್ರಥಮ ಬಾರಿಗೆ ನಡೆಯುವ ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯದ ತಮಿಳುನಾಡಿನ ಸೇಲಂ, ಹೊಸೂರು,ಆಂಧ್ರಪ್ರದೇಶದ ಹಿಂದೂಪುರ,ಅನಂತಪುರ,ಮಹಾರಾಷ್ಟ್ರದ ಕೊಲ್ಲಾಪುರ,ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದಲು ರೈತರು ಬರುತ್ತಾರೆ.

ದನಗಳ ಜಾತ್ರೆಗೆ ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಬರುವ ರೈತರಿಗೆ ದೇವಾಲಯದ ವತಿಯಿಂದ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಹಾಗೂ ರೈತರಿಗೆ ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ಏರ್ಪಡಿಸಲಾಗುತ್ತದೆ. ಜಾತ್ರೆಗೆ ಬರುವ ಎತ್ತುಗಳಿಗೆ ಯಾವುದೇ ಸುಂಕವಿಲ್ಲ ಎಂದು ಘಾಟಿ ದೇವಾಲಯದ ಆಡಳಿತಾಧಿಕಾರಿ ನಾರಾಯಣಸ್ವಾಮಿ ಹೇಳಿದ್ದಾರೆ.

ರಾಸುಗಳಿಗೆ ಕುಡಿಯುವ ನೀರು, ಮೇವು, ಲಸಿಕೆ, ದನಗಳನ್ನು ಕಟ್ಟಿಹಾಕುವ ಶೆಡ್ ಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ, ರೈತರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಜಾತ್ರೆಯಲ್ಲಿ ಅಮೃತ್ ಮಹಲ್, ಹಳ್ಳಿಕಾರ್ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬರುತ್ತವೆ. ಹೀಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ರೈತರು ಕೃಷಿ ಕೆಲಸಗಳಿಗೆ ಹೋರಿಗಳ ಖರೀದಿಗೆ ಬರುತ್ತಾರೆ.

Leave a Reply

Your email address will not be published. Required fields are marked *

error: Content is protected !!