ರೈತ ಮುಖಂಡರ ಮೇಲೆ ಹಲ್ಲೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಒತ್ತಾಯ

ಕೋಲಾರ: ಶ್ರೀನಿವಾಸಪುರ ತಹಶೀಲ್ದಾರ್ ಕಚೇರಿ ಮುಂದೆ ಶಾಂತಿಯುತ ಹೋರಾಟ ಮಾಡುತ್ತಿದ್ದ ರೈತ ಸಂಘದ ಕಾರ್ಯಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಬೆಂಬಲಿಗರು ಮಾಡಿರುವ ಹಲ್ಲೆ ಹಾಗೂ ಅಂಬೇಡ್ಕರ್ ಪೋಟೋಗೆ ಅವಮಾನ ಮಾಡಿರುವ ತಹಶೀಲ್ದಾರ್‌ ಅವರ ಅನುಚಿತ ವರ್ತನೆ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಹೈಕೋರ್ಟ್ ಆದೇಶ ಪ್ರಕಾರ ಕೇಂದ್ರ ಸಚಿವಾಲಯದ ಪತ್ರ ವ್ಯವಹರದಂತೆ ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೇ ನಂ.1 ಮತ್ತು 2ರಲ್ಲಿ ಜಂಟಿ ಸರ್ವೇ ಮಾಡಿ ಒತ್ತುವರಿ ಮಾಡಿಕೊಂಡಿರುವ ರಮೇಶ್‌ಕುಮಾರ್‌ರವರ ಅರಣ್ಯ ಒತ್ತುವರಿಯನ್ನು ತೆರೆವುಗೊಳಿಸಬೇಕೆಂದು ಒಂದು ವಾರದ ಮುಂಚೆಯೇ ಅರೆಬೆತ್ತಲೆ ಹೋರಾಟ ಮಾಡುತ್ತೇವೆಂದು ಪತ್ರಿಕಾ ಹೇಳಿಕೆ ಹಾಗೂ ತಹಶೀಲ್ದಾರ್ ಮತ್ತು ಪೋಲಿಸ್ ವರಿಷ್ಠಾಧಿಕಾರಿಗೆ ಲಿಖಿತ ರೂಪದಲ್ಲಿ ಡಿ.4ರಂದು ಮನವಿ ನೀಡಿದ್ದಂತೆ ಡಿ.9 ರಂದು ತಾಲ್ಲೂಕು ಕಚೇರಿಯ ಮುಂದೆ ಆಂಬೇಡ್ಕರ್ ನಂಜುಂಡಸ್ವಾಮಿ ಪೋಟೋ ಸಮೇತ ಶಾಂತಿಯುತ ಮೌನ ಪ್ರತಿಭಟನೆ ಮಾಡುತ್ತಿದ್ದಾಗ ಏಕಾಏಕಿ ರಮೇಶ್ ಕುಮಾರ್‌ರವರಿಗೆ ಜೈಕಾರ ಹಾಕಿಕೊಂಡು ಅವರ ಬೆಂಬಲಿಗರು ಪೋಲಿಸರ ಸಮ್ಮುಖದಲ್ಲಿಯೇ ನಮ್ಮ ಮೇಲೆ ಪೈಪು , ರಾಡುಗಳಿಂದ ಹಲ್ಲೆ ಮಾಡುತ್ತಿದ್ದರೂ ರಕ್ಷಣೆಗೆ ನಿಂತಿದ್ದ ಪೋಲಿಸರು ಮೂಕ ಪೇಕ್ಷಕರಂತೆ ಹಲ್ಲೆ ದಂದೆಕೋರರ ಪರ ನಿಂತಿದ್ದರೆಂದು ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ವಿಡಿಯೋಗಳ ಸಮೇತ ದೂರು ನೀಡಿ ನಿಕ್ಷಪತವಾಗಿ ತನಿಖೆ ಮಾಡಿ ನ್ಯಾಯ ಒದಗಿಸುವ ಜೊತೆಗೆ ಮುಂದಿನ ದಿನಗಳಲ್ಲಿ ರೈತಪರ ಹೋರಾಟಗಾರರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಆಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಅನ್ಯಾಯದ ವಿರುದ್ದ ದ್ವನಿ ಎತ್ತುವ ಹಕ್ಕಿದೆ ಅದರಂತೆ ಪ್ರಜಾಪ್ರಭುತ್ವದಲ್ಲಿ ಪ್ರಜಾ ಸೇವಕರಾಗಿ ಕೆಲಸ ಮಾಡುವ ತಾಲ್ಲೂಕಿನ ಪ್ರಥಮ ಪ್ರಜೆಯಾಗಿರುವ ದಂಡಾಧಿಕಾರಿಗಳು ನ್ಯಾಯ ಕೇಳಲು ಬರುವ ಹೋರಾಟಗಾರರಿಗೆ ಸ್ಪಂದಿಸಬೇಕು ಅದನ್ನು ಬಿಟ್ಟು ರಾಜಕಾರಣಿಗಳ ಒತ್ತಡಕ್ಕೆ ಮಣಿದು ತಾಳ್ಮೆ ಕಳೆದುಕೊಂಡು ನಾನು ಒಬ್ಬ ಅಧಿಕಾರಿ ಎಂದು ಮರೆತು ಏಕಾಏಕಿ ದೌರ್ಜನ್ಯ ಮಾಡುತ್ತಿದ್ದ ರಮೇಶ್‌ಕುಮಾರ್ ಬೆಂಬಲಿಗರ ಪರವಾಗಿ ನಿಂತು ಆಂಬೇಡ್ಕರ್‌ರವರ ಪೋಟೋವನ್ನೇ ಎತ್ತಿ ಬಿಸಾಡಿ ಅವಮಾನ ಮಾಡಿರುವವರ ಜೊತೆಗೆ ಹೋರಾಟಗಾರರ ಮೇಲೆ ಒಬ್ಬ ದಂಡಾಧಿಕಾರಿಯ ಮುಂದೆಯೇ ಹಲ್ಲೆ ನಡೆಯುತ್ತಿದ್ದರೆ ಅದನ್ನು ಪೋಲಿಸ್‌ರಿಗೆ ಹೇಳಿ ತಡೆಯಬೇಕಾದ ತಾವುಗಳೇ ದಂದೆಕೋರರ ಪರ ನಿಂತರೇ ಇನ್ನೂ ಜನಸಾಮಾನ್ಯರ ಕೆಲಸ ಯಾವ ರೀತಿ ಅಗುತ್ತದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ತಾವು ನೀಡಿರುವ ವಿಡಿಯೋಗಳನ್ನು ವೀಕ್ಷಣೆ ಮಾಡಿ ಅಧಿಕಾರಿಯೆಂದು ಮರೆತು ರಾಜಕಾರಣಿಯ ಬೆಂಬಲಿಗರಂತೆ ವರ್ತನೆ ಮಾಡಿರುವ ತಹಶೀಲ್ದಾರ್ ಸುದೀಂದ್ರ ರವರ ವಿರುದ್ದ ಶಿಸ್ತು ಕ್ರಮ ಕೈಗೊಂಡು ನೊಂದ ಹೋರಾಟಗಾರರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಹೋರಾಟ ಪ್ರತಿಯೊಬ್ಬ ನಾಗರೀಕರ ಹಕ್ಕು ಅನ್ಯಾಯದ ವಿರುದ್ದ ದ್ವನಿ ಎತ್ತುವವರ ವಿರುದ್ದ ದೌರ್ಜನ್ಯ ಮಾಡಿರುವ ಬಗ್ಗೆ ಸತ್ಯಾಸತ್ಯತೆ ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಿ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದ್‌ರೆಡ್ಡಿ, ರಾಜೇಶ್, ವಿನು, ಕಿಶೋರ್, ಮುಂತಾದವರಿದ್ದರು.

Leave a Reply

Your email address will not be published. Required fields are marked *