
ಕೋಲಾರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಾರಥ್ಯದ ಜಿಲ್ಲಾ ಪೊಲೀಸ್ ತಂಡದ ವಿರುದ್ಧ ಎ.ಜಿ.ಸುರೇಶ್ ಕುಮಾರ್ ನೇತೃತ್ವದ ಪತ್ರಕರ್ತರು ಎಂಟು ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದರು.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಕ್ರೀಡಾಕೂಟದ ಪ್ರಯುಕ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಪತ್ರಕರ್ತರು ಮಿಂಚು ಹರಿಸಿದರು.
ಮೊದಲು ಬ್ಯಾಟ್ ಮಾಡಿದ ಪೊಲೀಸರು ನಿಗದಿತ 8 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿದರು. ಪತ್ರಕರ್ತರ ತಂಡದವರು 6.1 ಓವರ್‌ಗಳಲ್ಲಿ ಕೇವಲ 2ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿದರು.
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕಿರಣ್ ಹಾಗೂ ರಘುರಾಜ್ ಉತ್ತಮ ಆರಂಭ ನೀಡಿದರು. ಸಿಕ್ಸರ್‌ಗಳ ಮೂಲಕ ಪೊಲೀಸರ ಬೆವರಿಳಿಸಿದರು. ನಂತರ ನಾಯಕ ಸುರೇಶ್ ಕುಮಾರ್ ಹಾಗೂ ಸಮೀರ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಬೌಲಿಂಗ್‌ನಲ್ಲೂ ಪತ್ರಕರ್ತರು ಉತ್ತಮ ಪ್ರದರ್ಶನ ನೀಡಿದರು. ದೀಪಕ್ ಎರಡು ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದರು ಮಿಂಚಿದರು. ಮುದುವಾಣಿ ವೇಣು, ಮಹೇಶ್, ಕಿರಣ್, ಸುನಿಲ್ ಕೂಡ ಗಮನ ಸೆಳೆದರು. ರವಿಕುಮಾರ್ ಉತ್ತಮ ಕ್ಯಾಚ್ ಪಡೆದರು. ತಂಡದಲ್ಲಿ ರವಿಕುಮಾರ್, ಗಂಗಾಧರ್, ರವಿ, ಓಂಕಾರ ಮೂರ್ತಿ ಇದ್ದರು.
ಪೊಲೀಸರು, ಸಿಬ್ಬಂದಿ ವರ್ಗದವರು ಸ್ಥಳದಲ್ಲಿದ್ದು ಆಟಗಾರರಿಗೆ ಹುರುಪು ತುಂಬಿದರು. ತಮ್ಮ ತಂಡದ ಆಟಗಾರರು ಸಿಕ್ಸರ್, ಬೌಂಡರಿ ಗಳಿಸಿದ ಚಪ್ಪಾಳೆ ತಟ್ಟಿ ಸ್ಫೂರ್ತಿ ತುಂಬಿದರು. ಆದರೆ, ಕಳೆದ ವರ್ಷ ಪೊಲೀಸರ ಎದುರು ಸೋತಿದ್ದ ಪತ್ರಕರ್ತರು ಈ ಬಾರಿ ಗೆಲ್ಲುವ ಮೂಲಕ ತಿರುಗೇಟು ನೀಡಿದರು.