ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿ- ಶಾಸಕ ಧೀರಜ್ ಮುನಿರಾಜ್

ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ನೀಡುವುದಕ್ಕೆ ಮೊದಲ ಆದ್ಯತೆ ನೀಡಬೇಕು, ಜನರು ಆರೋಗ್ಯಕರ ಜೀವನ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿಂದು ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ಕೆಡಿಪಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳು ತೆಗೆಯುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಇದಕ್ಕೆ ಬೇಕಾದಂತಹ ಸಹಕಾರ ನೀಡಲಾಗುವುದು ಎಂದರು.

ನೇಕಾರ ಸಮ್ಮಾನ್ ಯೋಜನೆಯಡಿ 5847 ಘಟಕಗಳಿಂದ 14080 ನೇಕಾರರಿಗೆ 5 ಸಾವಿರ ರೂ.ಗಳ ಸಹಾಯಧನ ನೀಡಲು ನೋಂದಣಿ ಪ್ರಕ್ರಿಯೆ ನಡೆದಿದೆ. ಈ ಯೋಜನೆಯಲ್ಲಿ ಸ್ಥಳೀಯ ನೇಕಾರರಿಗೆ ಮಾತ್ರ ಅವಕಾಶವಿದ್ದು, ಹೊರ ರಾಜ್ಯದ ನೇಕಾರರಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಜವಳಿ ಇಲಾಖೆಯ ಅಕಾರಿಗಳು ಮಾಹಿತಿ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ 30 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 15.30 ಕೋಟಿ ರೂ. ಕಾಮಗಾರಿಗಳು ಬಾಕಿ ಇದೆ. 3 ಕೋಟಿ ರೂ. ಕೆಲಸ ಆಗಿದೆ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು, ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ನಗರಸಭೆ ಎಇಇ  ರಾಮೇಗೌಡ ಹೇಳಿದರು.

ನಗರೋತ್ಥಾನ ಯೋಜನೆಯ ಅನುದಾನ ವಿಳಂಬಕ್ಕಾಗಿ ಜಿಲ್ಲಾಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಎಸ್‍ಇಪಿ, ಟಿಎಸ್‍ಪಿಗೆ ಅನುದಾನ ಬಳಕೆಯಾಗಬೇಕು. ಕಾಮಗಾರಿಗಳನ್ನು ವಿಳಂಬ ಮಾಡಬೇಡಿ ಎಂದು ಶಾಸಕರು ಸೂಚಿಸಿದರು.

ಮದ್ಯಮುಕ್ತ ಗ್ರಾಮ ಮಾಡಿ

ತಾಲೂಕಿನ ಹಳೇಕೋಟೆ ಸೇರಿದಂತೆ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಅಬಕಾರಿ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕು. ಮದ್ಯ ಮಾರಾಟ, ಅಬಕಾರಿ ನಿಯಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಪ್ರತಿ ತಿಂಗಳಲ್ಲಿ 1ನೇ ಹಾಗು 3ನೇ ಶನಿವಾರದಂದು ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಜಾಗೃತಿ ಮೂಡಿಸಿ. ಮದ್ಯ ಮುಕ್ತ ಗ್ರಾಮವನ್ನು ಮಾಡಲು ಸಹಕರಿಸಬೇಕು. ಆಯೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಸಹ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಹಣ ಉಳಿಸಲು ಅವೈಜ್ಞಾನಿಕ ರಸ್ತೆ ಕಾಮಗಾರಿ

ತಾಲೂಕಿನಲ್ಲಿ ಇತ್ತೀಚೆಗೆ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸಿ ಅನೇಕ ಸಾವು-ನೋವುಗಳು ಸಂಭವಿಸುತ್ತಿದ್ದು, ಈ ಕುರಿತು ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಮೊದಲು ನಾವೆಲ್ಲರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಹೆದ್ದಾರಿಗಳಲ್ಲಿ ಕೆಲವೊಂದು‌ ಕಡೆ ಸೂಕ್ತ ತಿರುವುಗಳು ಇಲ್ಲ, ಅನುದಾನ ಉಳಿಸಲು ತಗ್ಗು, ಎತ್ತರ ಪ್ರದೇಶಗಳಲ್ಲಿ ಮಾತ್ರ ಫ್ಲೈ ಓವರ್, ಅಂಡರ್  ಪಾಸ್ ನಿರ್ಮಿಸಲಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದರು.

ರಸ್ತೆ ಕಾಮಗಾರಿ ಸಂದರ್ಭದಲ್ಲಿ ಎಲ್ಲಿ ಊರು‌ ಇದೆ, ಎಲ್ಲಿ ಜನ, ಜಾನುವಾರುಗಳು ಓಡಾಡುತ್ತವೆ, ಎಲ್ಲಿ ರಾಜಕಾಲುವೆ ಹಾದು ಹೋಗುತ್ತದೆ ಅಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನ ಬಿಟ್ಟು ಬೇರೆ ಎಲ್ಲೋ ಏನೋ ಕ್ರಮಗಳನ್ನು ಕೈಗೊಂಡರೆ ಹೇಗೆ. ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯವಿರುವ ಕಡೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!