ಹೈವೆ ರಸ್ತೆಯಲ್ಲಿ ವಾಕಿಂಗ್ ಮಾಡುವ ವೇಳೆ ವೃದ್ಧ ಮಹಿಳೆ ಕೊರಳಲ್ಲಿದ್ದ ಚಿನ್ನ ಎಗರಸಿ ಪರಾರಿಯಾಗಿದ್ದ ಖದೀಮರು: ಕಳ್ಳರ ಬೆನ್ನತ್ತಿ ಬಂಧಿಸಿ ಚಿನ್ನದ ಸರ ವಶಕ್ಕೆ‌ ಪಡೆದ ಪೊಲೀಸರು: ವೃದ್ಧೆಗೆ ಚಿನ್ನದ ಮಾಂಗಲ್ಯ ಸರ ವಾಪಸ್ ನೀಡಿದ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ: ಪೊಲೀಸರ ಕಾರ್ಯಕ್ಕೆ ವೃದ್ಧೆ ಮೆಚ್ಚುಗೆ

ಸೆ‌.19ರಂದು ತಾಲೂಕಿನ ಗುಂಜೂರು ನಿವಾಸಿ ಶೈಲಜಾ ಅವರು ಒಂಟಿಯಾಗಿ ಹಿಂದೂಪುರ ಹಾಗೂ ಯಲಹಂಕ ಹೈವೆ ರಸ್ತೆಯಲ್ಲಿ ತನ್ನ ಪಾಡಿಗೆ ತಾನು ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ವೃದ್ಧ ಮಹಿಳೆಯ ಕೊರಳಲ್ಲಿದ್ದ 80 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದರು.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶೈಲಜಾ ಅವರು ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಕಳ್ಳರ ಬೆನ್ನತ್ತಿದ ಪೊಲೀಸರು, ಖತರ್ನಾಕ್  ಕಳ್ಳರನ್ನು ಬಂಧಿಸಿ, ಖದೀಮರಿಂದ ಚಿನ್ನದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದು ವೃದ್ಧೆ ಶೈಲಜಾ ಅವರಿಗೆ ವಾಪಸ್ ನೀಡಿದ್ದಾರೆ.

ಮರಳಿ ಮಾಂಗಲ್ಯ ಸರ ಪಡೆದ ಶೈಲಜಾ ಅವರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಘಟನೆ ವಿವರ 

2024 ಸೆಪ್ಟೆಂಬರ್ 19 ರಂದು ಗುಂಜೂರು ಬಳಿ ಶೈಲಜಾ ಅವರು ಎಂದಿನಂತೆ ಬೆಳಿಗ್ಗೆ ಹೈವೆ ರಸ್ತೆ ಪಕ್ಕದಲ್ಲಿ ವಾಕಿಂಗ್ ಮಾಡುವಾಗ ಕೆಂಪು ಬಣ್ಣದ ಶಿಫ್ಟ್ ಕಾರ್ ನಲ್ಲಿ ನಾಲ್ಕು ಜನ ಬಂದು ಅದರಲ್ಲಿ ಒಬ್ಬ ಕಾರಿನಿಂದ ಕೆಳಗೆ ಇಳಿದು ಶೈಲಜಾ ರವರ ಕೊರಳಿನಲ್ಲಿದ್ದ ಚಿನ್ನದ ಚೈನನ್ನು ಕಿತ್ತುಕೊಂಡು ಹೋಗಿರುತ್ತಾರೆ.

ವಿಷಯ ತಿಳಿದ ಡಿವೈಎಸ್ ಪಿ ರವಿ.ಪಿ, ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸೆಕ್ಟ‌ರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ಪೊಲೀಸರ ತಂಡ  ಒಟ್ಟು 34 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಸಹ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಬಂಧಿತರನ್ನು ಸಯ್ಯದ್ರಿಹ್ವಾನ್ (19), ಶಿವಕುಮಾರ್ (34), ಚಂದ್ರಶೇಖ‌ರ್ (44), ಅಪ್ಪು (23) ಹಾಗೂ 17 ವರ್ಷದ ಅಪ್ರಾಪ್ತ ಬಾಲಕ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!