ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣ: ಕರ್ತವ್ಯಲೋಪವೆಸಗಿದ ಡ್ರಗ್ ಕಂಟ್ರೋಲರ್ ಉಮೇಶ್ ಸಸ್ಪೆಂಡ್-ರಿಂಗರ್‌ ಲ್ಯಾಕ್ಟೇಟ್‌ ದ್ರಾವಣ ಪೂರೈಸಿದ ಪಶ್ಚಿಮ ಬಂಗಾಳದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಂಪೆನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಆದೇಶ- ಸಿಎಂ ಸಿದ್ದರಾಮಯ್ಯ

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪಕ್ಕಾಗಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಿಂಗರ್‌ ಲ್ಯಾಕ್ಟೇಟ್‌ ದ್ರಾವಣ ಪೂರೈಸಿರುವ ಪಶ್ಚಿಮ ಬಂಗಾಳದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಂಪೆನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಆದೇಶಿಸಲಾಗಿದೆ ಎಂದರು.

ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಡ್ರಗ್ ಪೂರೈಸಿದ ಕಂಪೆನಿಯಿಂದಲೂ ಪರಿಹಾರವನ್ನು ವಸೂಲು ಮಾಡಿ, ಮೃತರ ಕುಟುಂಬಕ್ಕೆ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಈ ರೀತಿಯ ಸಾವಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲು ನಿರ್ಧಾರಿಸಲಾಗಿದೆ ಎಂದು ಹೇಳಿದರು.

ಬಾಣಂತಿಯರ ಸಾವಿನ ಕುತು ತಜ್ಞರ ಸಮಿತಿ ರಚಿಸಿ ಘಟನಾವಳಿಗಳ ಬಗ್ಗೆ ಪ್ರಾಥಮಿಕ ವರದಿ ಪಡೆಯಲಾಗಿದೆ.
ಬಾಣಂತಿಯರಿಗೆ ನೀಡಲಾಗಿರುವ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣದ ಎಲ್ಲಾ ಬ್ಯಾಚ್‌ಗಳ ಬಳಕೆಯನ್ನು ಹಿಂಪಡೆಯಲಾಗಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಸಲಾದ ದ್ರಾವಣ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.

ತಮಿಳುನಾಡು ಮಾದರಿಯಲ್ಲಿ ಔಷಧಿಗಳ ಖರೀದಿ ಪ್ರಕ್ರಿಯೆ ಹಾಗೂ ಔಷಧ ನಿಯಂತ್ರಣ ಇಲಾಖೆಯನ್ನು ಪುನಾರಚನೆ ಮಾಡುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪ್ರಯೋಗಾಲಯದ ವರದಿ ಬಂದ ಬಳಿಕ ಘಟನೆಗೆ ಜವಾಬ್ದಾರರಾದ ಪ್ರತಿಯೊಬ್ಬರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್‌ ಕಂಟ್ರೋಲರ್‌ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದರು.

ಔಷಧ ನಿಯಂತ್ರಣ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹಲವು ರೀತಿಯ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!