ಪ.ಜಾತಿ ಮತ್ತು ಪ.ಪಂಗಡ, ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಜಾರಿಯಾಗಿರುವ ಯೋಜನೆಗಳ ಸದ್ಬಳಕೆ ಆಗಬೇಕು-ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ಪ. ಜಾತಿ ಮತ್ತು ಪ. ಪಂಗಡಗಳ ಅಲೆಮಾರಿ ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳು ಜಾರಿಗೊಳಿಸಿದ್ದು, ಅರ್ಹರಿಗೆ ಯೋಜನೆಗಳ ಸೌಲಭ್ಯ ಸಿಗುವಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ. ಜಾತಿ ಮತ್ತು ಪ. ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಡಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ನಿಗಮದ ವಿವಿಧ ಯೋಜನೆಗಳ ಕುರಿತ ಪೋಸ್ಟರ್ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

ಅಲೆಮಾರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ. ಜಾತಿ ಮತ್ತು ಪ.ಪಂಗಡ ನಿಗಮದಿಂದ ಹಲವು ಯೋಜನೆಗಳು ಜಾರಿಯಾಗಿದ್ದು ಭೂ ಒಡೆತನ ಯೋಜನೆ, ನಿವೇಶನ ಹಾಗೂ ಮನೆ ಸೌಲಭ್ಯ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಸಮಗ್ರ ಗಂಗಾ ಕಲ್ಯಾಣ ಯೋಜನೆ ಕಾರ್ಯಕ್ರಮಗಳಿದ್ದು ಇವುಗಳ ಬಗ್ಗೆ ಅಲೆಮಾರಿ ಸಮುದಾಯದ ಜನರಿಗೆ ಅರಿವು ಮೂಡಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಕ್ರಮ ವಹಿಸಿ ಎಂದರು.

2023 ರಿಂದ 24 ನೇ ಸಾಲಿನ ವರೆಗೆ ನಿಗಮದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ಧ ಫಲಾನುಭವಿಗಳ ಆಯ್ಕೆಯನ್ನು ಲಾಟರಿ ಮೂಲಕ(ರ್ಯಾಂಡಮ್) ಸಮಿತಿ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಜಿ, ನಾರಾಯಣ, ರತ್ನಮ್ಮ, ಎಂ.ರವಿ, ಹನುಮಂತರಾಜು, ವೆಂಕಟೇಶ್, ನಾಲ್ಕು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *