ಹಾದ್ರಿಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಹಾದ್ರಿಪುರ ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಎರಡೂವರೆ ದಶಕಕ್ಕೂ ಹೆಚ್ಚಿನ ಕಾಲವಾಗಿದ್ದು, ಅಧಿಕಾರಿಗಳು ಮತ್ತು ಸ್ಥಳೀಯ ಸದಸ್ಯರ ನಿರ್ಲಕ್ಷ್ಯದಿಂದ ದಲಿತರು ವಾಸಿಸುವ ಪ್ರದೇಶದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ, ದಲಿತರು ವಾಸಿಸುವ ಪ್ರದೇಶ ಎಂಬ ಕಾರಣಕ್ಕೆ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ದಲಿತ ನಿವಾಸಿಗಳು ಆರೋಪಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಹಾದ್ರಿಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ‘ವಿ’ ಆಕಾರದಲ್ಲಿ ಚರಂಡಿ ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಬಹುತೇಕ ಕಡೆ ಹೂಳು ತುಂಬಿಕೊಂಡಿದೆ. ಇದರಿಂದಾಗಿ, ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಹೆಚ್ಳಳಕ್ಕೆ ಕಾರಣವಾಗಿದೆ. ಕೆಲವೆಡೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ನಿವಾಸಿಗಳು ಮೂಗು ಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗಿದೆ.
‘ಚರಂಡಿ ನಿರ್ಮಿಸಿ ಹಲವು ವರ್ಷಗಳೆ ಕಳೆದಿವೆ, ಹೊಸ ಚರಂಡಿ ನಿರ್ಮಿಸಿ’ ಎಂದು ಜನರು ಹಲವು ಭಾರಿ ಪಂಚಾಯಿತಿಯಲ್ಲಿ ಮನವಿ ಮಾಡಿದ್ದಾರೆ ಎಂದು ಹಾದ್ರಿಪುರ ನಿವಾಸಿ ಮಂಜುಳ ಅವರು ಹೇಳಿದರು. “ಆದರೆ, ಈವರೆಗೆ ಸಂಬಂಧಪಟ್ಟವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೊಸ ಚರಂಡಿ ನಿರ್ಮಿಸುವುದಿರಲಿ, ಹಳೆ ಚರಂಡಿಗಳ ಹೂಳನ್ನೂ ತೆಗೆದಿಲ್ಲ. ಇದರಿಂದಾಗಿ ಕಳೆದ ವರ್ಷ ಹಲವು ಸಣ್ಣ ಮಕ್ಕಳು ಡೆಂಗ್ಯೂ, ಟೈಪಾಯ್ಡ್‌ನಂತಹ ಜ್ವರಕ್ಕೆ ಒಳಗಾಗಿದ್ದರು. ಈ ಬಗ್ಗೆ ಸಹ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ” ಎಂದು ಅವರು ಹೇಳಿದರು.
ಈ ಬಗ್ಗೆ ಮಾತನಾಡಿದ ಗ್ರಾಮದ ನಿವಾಸಿ ರವಿಕುಮಾರ್, “ಕಳೆದ ಒಂದು ವರ್ಷದಿಂದ ನಮ್ಮ ಮನೆ ಮುಂದೆ ಚರಂಡಿ ನೀರು ಕಟ್ಟಿಕೊಂಡು ರಸ್ತೆಗೆ ಬರುತ್ತಿದೆ. ಹಲವರು ತಾವು ಮನೆ ನಿರ್ಮಿಸುವ ಸಮಯದಲ್ಲಿ ಚರಂಡಿಯನ್ನು ನೆಲಸಮ ಮಾಡಿದ್ದಾರೆ. ಮಳೆ ಬಂದರೆ ಮೊಳಕಾಲುದ್ದ ನೀರು ನಿಲ್ಲುತ್ತದೆ. ಇದೇ ಪ್ರದೇಶದಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಸಣ್ಣಸಣ್ಣ ಮಕ್ಕಳು ಹಾಗೂ ವೃದ್ಧರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದು, ವಾಟ್ಸಾಪ್ ಮೂಲಕ ಸಮಸ್ಯೆಯ ಫೋಟೋ ಕಳುಹಿಸಿದ್ದೇನೆ. ಇಬ್ಬರೂ ಸಹ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮ ಪಂಚಾಯಿಯಲ್ಲಿ ‘ಇ’ ಖಾತೆ ಹಾಗೂ ಕಂದಾಯ ಸಂಗ್ರಹ ಬಿಟ್ಟು ಬೇರೆ ಕೆಲಸಗಳೇ ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧ್ಯಕ್ಷರು ‘ನಮ್ಮ ಬಳಿ ಚರಂಡಿ ನಿರ್ಮಿಸುವಷ್ಟು ಅನುದಾನ ಇಲ್ಲ’ ಎಂದು ಗದರಿಸಿ ಕಳುಹಿಸುತ್ತಾರೆ” ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.
“ನಮ್ಮದೇ ಪಂಚಾಯಿತಿಯ ಬೇರೆ ಊರಿನ ಸದಸ್ಯರು ಅನುದಾನ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಊರಿನ ಮೂವರು ಸದಸ್ಯರಿಗೆ ಗ್ರಾಮದ ಮೇಲೆ ಕಾಳಜಿ ಇಲ್ಲ. ನಮ್ಮ ಊರಿನ ಸದಸ್ಯರೇ ಈಗ ಅಧ್ಯಕ್ಷರಾಗಿದ್ದರೂ ಪ್ರಯೋಜನವಾಗುತ್ತಿಲ್ಲ. ಮುಖ್ಯವಾಗಿ, ಪ್ರಬಲ ಜಾತಿಗೆ ಸೇರಿದ ಸದಸ್ಯರು ದಲಿತರ ಪ್ರದೇಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಹೇಳಿದರು.