ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯು ಸೈಬರ್ ಹೂಡಿಕೆ ವಂಚನೆ ಪ್ರಕರಣದಲ್ಲಿ ರಾಜಸ್ಥಾನದ 4 ಜನರನ್ನು ಬಂಧಿಸಿದ್ದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಮಾಹಿತಿ ನೀಡಿದರು.
ಈ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ಮೋಸಗೊಳಿಸಿ, ಲಾಭದ ಹಂಚಿಕೆಯ ಭರವಸೆ ನೀಡಿ ಬ್ಯಾಂಕ್ ಖಾತೆಗಳನ್ನು ತೆರೆಯುವಂತೆ ಒತ್ತಾಯಿಸಿ, ನಂತರ ಈ ಖಾತೆಗಳು ವಿದೇಶಿ ವಿನಿಮಯಕ್ಕಾಗಿ ಅಗತ್ಯವಿದೆ ಎಂದು ಹೇಳಿದ್ದರು. ತನಿಖೆಯಲ್ಲಿ ಈ ಖಾತೆಗಳನ್ನು ವಂಚನೆಯ ಚಟುವಟಿಕೆಗಳಿಗಾಗಿ ದುರುಪಯೋಗಪಡಿಸಿರುವುದು ಬಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಇತರ ಶಂಕಿತರ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.
ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮೊಬೈಲ್ ಫೋನ್‌ಗಳನ್ನು ಕದ್ದು ಇತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ₹10,50,000 ಮೌಲ್ಯದ ವಿವಿಧ ಕಂಪನಿಯ 52 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪರಾರಿಯಾಗಿರುವ ಇತರ ಆರೋಪಿಗಳ ಶೋಧನಾ ಕಾರ್ಯ ಮುಂದುವರೆದಿವೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನವನ್ನು ನಿಗ್ರಹಿಸಲು ನಡೆಸಿದ ಇತ್ತೀಚಿನ ಕಾರ್ಯಾಚರಣೆಯಲ್ಲಿ, ವಿವಿಧ ಪೊಲೀಸ್ ಠಾಣೆಗಳು ಒಟ್ಟು 62 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಈ ಕಳ್ಳತನಗಳಿಗೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ. ಈ ಮುಖೇನ, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 37 ಪ್ರಕರಣಗಳನ್ನು ಬಯಲಿಗೆಳೆಯಲು ಸಹಾಯ ಮಾಡಿವೆ ಎಂದು ತಿಳಿಸಿದರು.