ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್

ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವರ್ಗಾವಣೆ ಮತ್ತು ಪ್ರಮೋಷನ್‌ಗೆ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ನಕಲಿ ಮದ್ಯದ ಪ್ರಮಾಣ ಹೆಚ್ಚಾಗಿದೆ. ಮದ್ಯದಂಗಡಿ ಮಾಲೀಕರು ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ (Excise Department) ಮಿತಿಮೀರಿದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವರ್ಗಾವಣೆ, ಪ್ರಮೋಷನ್​ಗೆ ಸನ್ನದುದಾರರಿಂದ ಮನಸೋ ಇಚ್ಛೆ ಕೋಟಿ ಕೋಟಿ ರೂ. ಲಂಚ ಕೇಳಲಾಗುತ್ತಿದೆ. ಅಧಿಕಾರಿಗಳ ಲಂಚಾವತಾರದಿಂದ‌ ನಕಲಿ ಅಂತಾರಾಜ್ಯ ಮದ್ಯ ಹೆಚ್ಚಳವಾಗಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದು, ನವೆಂಬರ್ 20ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್​ಗೆ ಕರೆ ನೀಡಲಾಗಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ವೈನ್ ಮರ್ಚೆಂಟ್​ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್​ ಹೆಗ್ಡೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 20ರಂದು ಕರ್ನಾಟಕದಾದ್ಯಂತ ಎಂಎಸ್​​ಐಎಲ್​ ಹೊರತುಪಡಿಸಿ ಎಲ್ಲಾ ಬಾರ್​ಗಳ ಬಂದ್​ಗೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ನಮ್ಮ ಜೊತೆ ಸಿಎಂ, ಅಬಕಾರಿ ಸಚಿವರು ಮೀಟಿಂಗ್ ಮಾಡಬೇಕು. ನಾವು 500-900 ಕೋಟಿ ರೂ. ಲಂಚದ ಬಗ್ಗೆ ಎಂದೂ ಮಾತನಾಡಿಲ್ಲ. ತಪ್ಪು ಮಾಹಿತಿಯನ್ನು ಪ್ರಧಾನಿಗೆ ಯಾರು ಕೊಟ್ಟರೋ ಗೊತ್ತಿಲ್ಲ. ಪ್ರಧಾನಿ ವಿಚಾರದ ಬಗ್ಗೆ ಏನೂ ಹೇಳಲ್ಲ ಎಂದಿದ್ದಾರೆ.

ಸಿಎಲ್​ 7 ಬಾರ್​ಗಳಿಗೆ ಬೇಕಾ ಬಿಟ್ಟಿ ಲೈಸನ್ಸ್ ಕೊಡಲಾಗುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವುದೇ ಇಲ್ಲ. ಆರ್​ಟಿಐ ಕಾರ್ಯಕರ್ತರ ಹೇಳಿಕೆ ಬಗ್ಗೆ ಮಾತನಾಡಿರೋದು ಸರಿಯಲ್ಲ. ನಮ್ಮ ಬೇಡಿಕೆಗಳ ಬಗ್ಗೆ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆ ಬಗ್ಗೆ ಸರ್ಕಾರ ತಿರ್ಮಾನ ತೆಗೆದುಕೊಂಡರೆ ಒಳ್ಳೇದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *