ಟೋಲ್ ಶುಲ್ಕ ತಪ್ಪಿಸಲು ಅಡ್ಡದಾರಿ ಹುಡುಕಿಕೊಂಡ ಬಿಬಿಎಂಪಿ ಕಸದ ಲಾರಿಗಳು: ತಾಲೂಕಿನ ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಸಂಚಾರ: ಕುರುಬರಹಳ್ಳಿ ಸಮೀಪದ ಸ್ಯಾಟಲೈಟ್ ರಿಂಗ್ ರೋಡ್ ಬಳಿ ಲಾರಿಗಳ ತಡೆದು ಪ್ರತಿಭಟಿಸಿದ ಗ್ರಾಮಸ್ಥರು

ಟೋಲ್ ಶುಲ್ಕ ತಪ್ಪಿಸಲು ಬಿಬಿಎಂಪಿ ಕಸದ ಲಾರಿಗಳು ಅಡ್ಡದಾರಿ ಹುಡುಕಿಕೊಂಡಿವೆ. ತಾಲೂಕಿನ ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ದಿನನಿತ್ಯ ಸುಮಾರು 40-50 ಕಸದ ಲಾರಿಗಳು ಸಂಚಾರ ಮಾಡುತ್ತಿವೆ. ರಸ್ತೆ ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ನಗರಸಭೆ ಸದಸ್ಯ ಬಂತಿ ವೆಂಕಟೇಶ್ ನೇತೃತ್ವದಲ್ಲಿಂದು ತಾಲೂಕಿನ ಕುರುಬರಹಳ್ಳಿ ಸಮೀಪದ ಸ್ಯಾಟಲೈಟ್ ರಿಂಗ್ ರೋಡ್ ಬಳಿ ಸುಮಾರು 9ಕಸದ ಲಾರಿಗಳನ್ನು ತಡೆದು ಲಾರಿ ಚಾಲಕರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಎಲ್ಲಾ ಲಾರಿಗಳನ್ನು ಕೂಡಲೇ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಪೊಲೀಸ್ ಇಲಾಖೆಗೆ ಮನವಿ ಮಾಡಲಾಯಿತು.

ಈ ವೇಳೆ ಮಾಧ್ಯಮದವರೊಂದಿಗೆ ನಗರಸಭೆ ಸದಸ್ಯ ಬಂತಿ ವೆಂಕಟೇಶ್ ಮಾತನಾಡಿ, ಕೈಗಾರಿಕಾ ಪ್ರದೇಶದ ವೀರಾಪುರ ಗ್ರಾಮದ ಮಾರ್ಗವಾಗಿ ಬಿಬಿಎಂಪಿ ಕಸ ತುಂಬಿದ ಲಾರಿಗಳ ಸಂಚಾರ ಮಿತಿ ಮೀರಿದೆ. ಅಪಘಾತ ನಡೆಯುವ ಮುನ್ನ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಪ್ರತಿದಿನ ನೂರಾರು ಲಾರಿಗಳು ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುತ್ತಿವೆ. ಕಸ ತುಂಬಿದ ಲಾರಿಗಳು ಇಷ್ಟು ವರ್ಷಗಳಿಂದಲೂ -ದಾಬಸ್‌ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುತ್ತಿದ್ದವು. ಆದರೆ, ಹುಲಿಕುಂಟೆ ಸಮೀಪ ಟೋಲ್ ಪ್ರಾರಂಭವಾದ ನಂತರ ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ಈಗ ದೊಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಮೂಲಕ ಸಂಚರಿಸುತ್ತಿವೆ ಎಂದರು.

ಗ್ರಾಮಗಳ ಮೂಲಕ ಕಸ ತುಂಬಿದ ಲಾರಿಗಳು ಹೋಗುವಾಗ ಬರುತ್ತಿರುವ ದುರ್ನಾತ ಹಾಗೂ ರಸ್ತೆಯುದ್ದಕ್ಕೂ ಲಾರಿಯಿಂದ ಸೋರುತ್ತಿರುವ ತ್ಯಾಜ್ಯ ನೀರಿನಿಂದ ಗ್ರಾಮಸ್ಥರು ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಟೋಲ್ ಶುಲ್ಕ ಉಳಿಸುವ ನೆಪದಲ್ಲಿಸ ಕಸದ ಲಾರಿಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಕಸದ ಲಾರಿಗಳು ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಇತರೆಡೆ ಅಪಘಾತ ನಡೆಸಿ ಹತ್ತಾರು ಜನರ ಜೀವ ತೆಗೆದಿರುವ ಕುಖ್ಯಾತಿ ಪಡೆದಿವೆ. ಇಂತಹ ಲಾರಿಗಳಿಂದ ನಮ್ಮೂರಿನ ಭಾಗದಲ್ಲೂ ಅನಾಹುತ ಸಂಭವಿಸುವ ಮುನ್ನ ಕಸದ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

 

ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಬಂದ್ ಮಾಡುವಂತೆ ಶಾಸಕ ಧೀರಜ್ ಮುನಿರಾಜ್ ಅವರು ಸದನದಲ್ಲಿ ಹಲವಾರು ಧ್ವನಿ ಎತ್ತಿದ್ದಾರೆ. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವಿರುವ ಸುತ್ತಾಮುತ್ತ ಹಳ್ಳಿಗಳ ಜನರು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗದೇ ಊರು ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನಮ್ಮ ದೊಡ್ಡಬಳ್ಳಾಪುರ ಮಾರ್ಗವಾಗಿ ಕಸದ ಲಾರಿಗಳು ಸಂಚರಿಸಿ ಉಳಿದವರ ಪ್ರಾಣಕ್ಕೂ ಕುತ್ತುತರವು ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸ್ಥಳಕ್ಕೆ ಆರ್ ಟಿಒ ಅಧಿಕಾರಿಗಳು ದೌಡಾಯಿಸಿ ಲಾರಿಗಳ ದಾಖಲೆಗಳನ್ನು ಪರಿಶೀಲಿಸಿದರು. ಕೆಲ ಲಾರಿಗಳಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ದೊಡ್ಡಬೆಳವಂಗಲ ಠಾಣೆಗೆ ವಹಿಸಲಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *