ಏನಿದು ಅನುಭವ ಮಂಟಪ…….?

ಅನುಭವ ಮಂಟಪ…….

ಸ್ತಬ್ಧವಾಗುತ್ತಿರುವ ಅನುಭವ ಮಂಟಪದ ಮೌಲ್ಯಗಳು……

ಅದು ಗತಕಾಲದ ನೆನಪು ಮಾತ್ರವೇ ‌?
ವರ್ತಮಾನದ ಸ್ಪೂರ್ತಿದಾಯಕ ಮಾದರಿಯೇ ?…

ಏನಿದು ಅನುಭವ ಮಂಟಪ…….

ಸಾಮಾಜಿಕ, ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ ಬಹುತೇಕ ಎಲ್ಲರಿಗೂ ಇದು ತಿಳಿದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಮಾನ್ಯ ಜನರಿಗಾಗಿ ಒಂದಷ್ಟು ಸರಳ ನಿರೂಪಣೆ….

ತಾಂತ್ರಿಕವಾಗಿ ಹೇಳುವುದಾದರೆ, 12 ನೇ ಶತಮಾನದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಳಿ ಸ್ಥಾಪಿತವಾದ ಒಂದು ಸಂಸ್ಥೆ.

ಅನುಭವದ ಆಧಾರದ ಮೇಲೆ ಮೂಡಿದ ಜ್ಞಾನವನ್ನು ಹಂಚಿಕೊಳ್ಳಲು ಚಿಂತಕರ ಚಾವಡಿಯ ಒಂದು ಪ್ರಜಾಸತ್ತಾತ್ಮಕ ಚರ್ಚಾ ಕೂಟ ಅಥವಾ ವೇದಿಕೆ ಎಂದು ಹೇಳಬಹುದು.

ಬಸವಣ್ಣನವರ ಆಶಯದಿಂದ ಮೂಡಿದ ಈ ಪರಿಕಲ್ಪನೆ ಅಲ್ಲಮರ ಮುಖ್ಯ ಪಾತ್ರದಲ್ಲಿ ಜನ್ಮ ತಳೆದ ಬಗ್ಗೆ ಮಾಹಿತಿ ಇದೆ. ವಚನ ಸಾಹಿತ್ಯ ವಚನ ಚಳವಳಿಯಾಗಿ ಸಮಾನತೆಯ ಸಾಮಾಜಿಕ ಕ್ರಾಂತಿಯಲ್ಲಿ ಮಹತ್ವದ ಪಾತ್ರ ಅನುಭವ ಮಂಟಪದ್ದು.

ಅಕ್ಕಮಹಾದೇವಿ, ಚನ್ನಬಸವಣ್ಣ, ಸೂಳೆ ಸಂಕವ್ವ ಸೇರಿ ಸಮಾಜದ ಎಲ್ಲಾ ಜಾತಿಗಳ ಎಲ್ಲಾ ವರ್ಗಗಳ ಜನರಿಗೂ ಸಮಾನವಾಗಿ ವೇದಿಕೆ ಕಲ್ಪಿಸಿದ ಕೀರ್ತಿ ಅನುಭವ ಮಂಟಪಕ್ಕೆ ಸಲ್ಲುತ್ತದೆ.

ಈಗಿನ ಕಾಲದಲ್ಲಿ ಬಹಳಷ್ಟು ಮಡಿವಂತಿಕೆಗೆ ಒಳಪಡುವ ಜನ ಮತ್ತು ವಿಷಯಗಳಲ್ಲಿಯೂ ಆಗಲೇ ಬಹಳಷ್ಟು ಉದಾರತೆ ಇದದ್ದು ಅನುಭವ ಮಂಟಪದ ಹೆಗ್ಗಳಿಕೆ……

ವೇಶ್ಯೆಗೂ ಸ್ಥಾನ, ಅಸ್ಪೃಶ್ಯರಿಗೂ ಪ್ರವೇಶ, ವಿಧವೆಯೂ ಭಾಗವಹಿಸಬಹುದು ಎನ್ನುವ ಸನ್ನಿವೇಶವನ್ನು ‌12 ನೇ ಶತಮಾನದಲ್ಲಿ ಸೃಷ್ಟಿಸಿದ್ದರು ಎಂದರೆ ಅನುಭವ ಮಂಟಪದ ನಿಜವಾದ ಸಮಾನತೆ, ಮಾನವೀಯತೆ, ಪ್ರಜಾಸತ್ತಾತ್ಮಕತೆ, ಸೂಕ್ಷ್ಮತೆ ಅರ್ಥವಾಗುತ್ತದೆ.

21 ನೆಯ ಶತಮಾನದಲ್ಲಿಯು ಇನ್ನೂ ನನಸಾಗದ ಅಸಮಾನತೆಯ, ಭ್ರಷ್ಟಾಚಾರದ, ಜಾತಿ ಆಧಾರದ ಹೊಲಸು ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂಬುದೇ ನಾಚಿಕೆಗೇಡು.

ಅಲ್ಲಿನ ಚರ್ಚಾ ಗೋಷ್ಠಿಗಳ ಕಾರ್ಯಕಲಾಪದ ವಿವರಗಳನ್ನು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದವರಿಂದ ಕೇಳಿ ತಿಳಿದುಕೊಂಡಾಗ‌ ತುಂಬಾ ಸಂತೋಷ ಮತ್ತು ಆಶ್ಚರ್ಯವಾಯಿತು.

ಎಲ್ಲರಿಗೂ ಇದ್ದ ಅಭಿವ್ಯಕ್ತಿ ಸ್ವಾತಂತ್ರ್ಯ,
ಆಳವಾದ ಜ್ಞಾನ, ಪರಸ್ಪರ ಗೌರವಿಸುವಿಕೆ, ವಿಶಾಲ ಮನೋಭಾವ, ವೈಚಾರಿಕ ಪ್ರಜ್ಞೆ, ಸಂಯಮ, ವಿವೇಚನೆ ನಿಬ್ಬೆರಗಾಗಿಸುತ್ತದೆ.

ಬದುಕು ಈಗಿನಷ್ಟು ಸಂಕೀರ್ಣವಾಗಿರದೆ ಸರಳವಾಗಿದ್ದಾಗಲೂ ಅವರುಗಳಲ್ಲಿ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಜವಾಬ್ದಾರಿ, ಅಸಮತೋಲನದ ಬಗ್ಗೆ ಇದ್ದ ದೂರದೃಷ್ಟಿಯ ಚಿಂತನೆಗಳು ದಂಗುಬಡಿಸುತ್ತವೆ.

ಈಗಿನ ಸಂದರ್ಭದಲ್ಲಿ ಅನೇಕ ಆಡಳಿತ ಮಂಡಳಿಗಳು, ಇಲಾಖೆಗಳು, ಸಂಘ ಸಂಸ್ಥೆಗಳು, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಸೇರಿ ಅನುಭವ ಮಂಟಪದ ರೀತಿಯ ಬಹಳಷ್ಟು ವ್ಯವಸ್ಥೆ ಇದೆ. ಆದರೆ ಚರ್ಚೆಗಳು, ಮಾತುಕತೆಗಳು, ವಿಚಾರ ವಿನಿಮಯ ಎಲ್ಲವೂ ವಿವೇಚನಾರಹಿತ, ಬಾಲಿಶ, ಆಕ್ರೋಶ, ಸ್ವಾರ್ಥ, ಅಪ್ರಬುದ್ದತೆಯನ್ನು ಮೀರಲು ಸಾಧ್ಯವಾಗಿಲ್ಲ.

ಸಹಿಷ್ಣುತೆ, ಸಹಕಾರ, ಪರಸ್ಪರ ಗೌರವಿಸುವಿಕೆ, ಸಹನೆ ತೀರಾ ಅಪರೂಪವಾಗಿದೆ. ಜೋರು ಧ್ವನಿ, ವಿಷಯದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿದ್ದರೂ ಮಾತಿನಲ್ಲೇ ಗೆಲ್ಲುವ ಸಣ್ಣತನ, ಇನ್ನೊಬ್ಬರ ತಪ್ಪುಗಳನ್ನೇ ಎತ್ತಿ ತೋರಿಸಿ ತನ್ನ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು, ಅಸಭ್ಯ ಮಾತಿನಿಂದ ನಿಂದಿಸುವುದು, ಪ್ರಚೋದಿಸುವುದು, ಗಲಭೆ ಮಾಡಿ ಮಜಾ ನೋಡುವುದು ಒಂದೇ ಎರಡೇ……

ಅರ್ಥಪೂರ್ಣ ಚರ್ಚೆಯ ಮುಖಾಂತರ ಸತ್ಯದ ಹುಡುಕಾಟದ, ಬದುಕಿನ ಘನತೆಯನ್ನು ಹೆಚ್ಚಿಸುವ, ನೆಮ್ಮದಿಯ ಜೀವನ ವಿಧಾನದ ಮಾರ್ಗಗಳನ್ನು ಕಂಡುಹಿಡಿಯುವ, ಆ ಮೂಲಕ ಶಾಂತಿಯುತ ಸಮಾಜ ನಿರ್ಮಾಣ ಮಾಡುವ ಕನಸಿನ ಅನುಭವ ಮಂಟಪ ವಿಶ್ವಕ್ಕೇ ಒಂದು ಆದರ್ಶ ಮಾದರಿಯ ಪರಿಕಲ್ಪನೆ. ಕೇವಲ ಪ್ರದರ್ಶನದ ಗೊಂಬೆಯ ಸ್ತಬ್ಧ ಚಿತ್ರವಲ್ಲ.

ಮಾನವೀಯ ಮೌಲ್ಯಗಳನ್ನು, ಪ್ರಕೃತಿ ಪ್ರಾಣಿ ಪರಿಸರಗಳನ್ನು, ಚಿತ್ರ ಶಿಲ್ಪ ಕಲೆಗಳನ್ನು, ಇತಿಹಾಸದ ಮಹಾನ್ ಸಾಧಕರನ್ನು ಸ್ತಬ್ಧ ಚಿತ್ರಗಳ ಪ್ರದರ್ಶನವಾಗಿಸಿ ಅದೊಂದು ಮನರಂಜನೆ ಎಂದು ಭಾವಿಸಿ ಸೆಲ್ಪಿ ತೆಗೆದುಕೊಳ್ಳುವ ಕೃತಕ ಮನಸ್ಥಿತಿಗೆ ನಾವು ತಲುಪಿದ್ದೇವೆ.

ವಾಸ್ತವವಾಗಿ ಹೇಳಬೇಕೆಂದರೆ,
ಆಗ ಅನುಭವ ಮಂಟಪ ಒಂದು ನಾಡಿನ ಸಾಮಾಜಿಕ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿ ಸಾಮರ್ಥ್ಯ ಹೊಂದಿತ್ತು. ಈಗ ಪ್ರಜಾಪ್ರಭುತ್ವದ ಅಡಿಯಲ್ಲಿ ಅಂತಹ ಹಲವಾರು ಮಂಟಪಗಳು ಇದ್ದರೂ ವ್ಯವಸ್ಥೆ ದಿನೇ ದಿನೇ ಹದಗೆಡುತ್ತಿರುವುದು ಅತ್ಯಂತ ಶೋಚನೀಯ.

ಕಾಲ ಸರಿಯುವ ಮುನ್ನ,
ನಮ್ಮ ನಿಯಂತ್ರಣ ದಾಟುವ ಮುನ್ನ ಎಚ್ಚೆತ್ತುಕೊಳ್ಳೋಣ…..

ಸಾಮಾಜಿಕ ಜಾಲತಾಣಗಳು ಸೇರಿ ಎಲ್ಲಾ ಸಂಘಟನೆಗಳಿಗೂ ಅನುಭವ ಮಂಟಪ ಒಂದು ಮಾದರಿಯಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ…..

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *