ಇತ್ತೀಚೆಗೆ ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಅಕ್ರಮವಾಗಿ ಅಮಲು ಬರಿಸುವ ಮಾತ್ರೆಗಳನ್ನು ಯುವ ಜನರಿಗೆ ವಿದ್ಯಾರ್ಥಿಗಳಿಗೆ ಯಾರೋ ಕೆಲವು ವ್ಯಕ್ತಿಗಳು ಕದ್ದು ಮುಚ್ಚಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುತ್ತಾರೆಂದು ದೂರು ಕೇಳಿಬಂದಿತ್ತು.
ದೂರಿನ ಮಾಹಿತಿ ಮೇರೆಗೆ ಈ ಡ್ರಗ್ಸ್ ದಂಧೆಕೋರರ ಸುಳಿವನ್ನು ಪತ್ತೆ ಮಾಡಿ ಅ.31ರಂದು ಡ್ರಗ್ಸ್ ದಂಧೆಕೋರರ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಸದಾಶಿವನಗರ ಬಡಾವಣೆಯ ರಸ್ತೆಯಲ್ಲಿ ಡ್ರಗ್ಸ್ ಮಾರಾಟದ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಅಬ್ದುಲ್ ಖಾದರ್, ಬೀರೇಶ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳ ಬಳಿ ಇದ್ದಂತಹ ಸುಮಾರು 56 ಸಾವಿರ ರೂ. ಬೆಲೆಬಾಳುವ ಅಮಲು ಬರಿಸುವ 1700 ಮಾತ್ರೆಗಳನ್ನು ಮತ್ತು ಒಂದು ಹೋಂಡಾ ಆಕ್ಟಿವಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅಕ್ರಮ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಇತರೆ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಡ್ಡದಾರಿ ಹಿಡಿದು ಹಾಳಾಗುತ್ತಿದ್ದು ಹಾಗೂ ಇದರಿಂದ ಸಮಾಜದ ನೆಮ್ಮದಿ ಸ್ವಾಸ್ಥ ಹಾಳಾಗುತ್ತಿರುತ್ತದೆ. ಯುವಕರು ತಮ್ಮಲ್ಲಿರುವ ಅಗಾಧಶಕ್ತಿ, ಸಾಮರ್ಥ್ಯ, ಹೋರಾಟದ ಕೆಚ್ಚು, ಚೈತನ್ಯದ ಅರಿವಿಲ್ಲದೆ ಹಾಗೂ ತಮ್ಮ ಭವಿಷ್ಯದ ಚಿಂತನೆ, ಮುಂದಾಲೋಚನೆ ಮಾಡದೇ ತತ್‌ಕ್ಷಣದ ಸುಖ, ಸಂತೋಷ ಅನುಭವಿಸಲು ಪಾಶ್ಚಿಮಾತ್ಯ ಜೀವನ ಶೈಲಿಯ ಬೆನ್ನತ್ತಿ ಕೆಲ ಅಡ್ಡದಾರಿಗಳನ್ನು ತುಳಿದು ಮಾದಕ ವ್ಯಸನಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಅಲ್ಲದೆ ಯುವಕರು ವಾಸ್ತವ ಬದುಕಿನಿಂದ ಬಹುದೂರ ಸರಿಯುತ್ತಿರುವುದು ಸಾಮಾನ್ಯವಾಗಿ ಗೋಚರಿಸುತ್ತಿದೆ.
ಆದ ಕಾರಣ ಸಾರ್ವಜನಿಕರು ಈ ತರಹದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರ ಬಗ್ಗೆ ಪೊಲೀಸ್ ಸಹಾಯವಾಣಿ 112 (ERSS) ಗೆ ತಿಳಿಸಲು ಕೋರಿದೆ.