ಬೆಲೆ ಏರಿಕೆ ಬಿಸಿ ನಡುವೆ ಪಟಾಕಿ ಖರೀದಿಗೆ ಮುಗಿಬಿದ್ದ ಜನ 

ದೀಪಾವಳಿಯನ್ನು ದೀಪಗಳ ಹಬ್ಬ ಅಥವಾ ಬೆಳಕಿನ ಹಬ್ಬ ಎಂದು ಕರೆಯುತ್ತಾರೆ. ಇದು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಭಾರತೀಯ ಸಮುದಾಯಗಳಲ್ಲಿ ಅತ್ಯಂತ ವ್ಯಾಪಕವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ಒಂದಾಗಿದೆ.

ಈ ದೀಪಾವಳಿ ಹಬ್ಬವು ಕತ್ತಲಿನ ಮೇಲೆ ಬೆಳಕನ್ನು, ಕೆಡುಕಿನ ಮೇಲೆ ಒಳ್ಳೆಯತನದ ಬೆಳಕನ್ನು, ಅಜ್ಞಾನದ ಮೇಲೆ ಜ್ಞಾನದ ಬೆಳಕನ್ನು, ಅಧರ್ಮದ ಮೇಲೆ ಧರ್ಮದ ಬೆಳಕನ್ನು ಬೀರುವ ಹಬ್ಬವಾಗಿದೆ.

ದೀಪಾವಳಿ ಹಬ್ಬದ ದಿನದಂದು ಮನೆಯನ್ನು ವಿವಿಧ ದೀಪಗಳಿಂದ ಅಲಂಕರಿಸಲಾಗುತ್ತದೆ. ರಂಗೋಲಿ ಮತ್ತು ದೀಪಗಳಿಂದ ಮನೆಯನ್ನು ಅಲಂಕರಿಸುವುದೇ ಈ ದಿನದ ವಿಶೇಷ. ದೀಪಾವಳಿಯು ಕುಟುಂಬಕ್ಕೆ ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ.

ಕೆಲವರು ಈ ಹಬ್ಬವನ್ನು ಪಟಾಕಿಗಳನ್ನು ಸಿಡಿಸುವ ಮೂಲಕ ಸಂಭ್ರಮಿಸುತ್ತಾರೆ. ಈ ಹಿನ್ನೆಲೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತ‌ ನಗರದ ಕೆಸಿಪಿ ಸರ್ಕಲ್ ಬಳಿಯ ಮೈದಾನದಲ್ಲಿ 9 ಪಟಾಕಿ ಮಳಿಗೆಗಳನ್ನು ಇಡಲು ಅನುಮತಿ ನೀಡಲಾಗಿದೆ.

ಮಳಿಗೆಗಳಲ್ಲಿ ಪಟಾಕಿ ಖರೀಸಲು ಗ್ರಾಹಕರು ಮುಗಿಬಿದ್ದಿರುವ ದೃಶ್ಯ ಕಂಡುಬಂದಿತ್ತು. ದುಬಾರಿ ಬೆಲೆ ನಡುವೆಯೂ ನಿರೀಕ್ಷೆಗೂ ಮೀರಿ ಜನರು ಪಟಾಕಿಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಪ್ರತಿವರ್ಷಕ್ಕಿಂತ ಈ ವರ್ಷ ವ್ಯಾಪಾರ ಜೋರಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಟಾಕಿ ಖರೀದಿಸುತ್ತಿದ್ದಾರೆ. ಈ ಬಾರಿ ವ್ಯಾಪಾರದಲ್ಲಿ ಹೆಚ್ಚಿನ ನೀರಿಕ್ಷೆಯಿದೆ ಎಂದು ಪಟಾಕಿ ವ್ಯಾಪಾರಿ ರವಿ ಹೇಳಿದರು.

ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.10ರಷ್ಟು ಹೆಚ್ಚಾಗಿದೆ. ಆದರೂ, ಜನರ ಖರೀದಿಯ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಎಲ್ಲ ಬಗೆಯ ಪಟಾಕಿಗಳನ್ನು ಒಳಗೊಂಡಿರುವ ಒಂದು ಬಾಕ್ಸ್ ಪಟಾಕಿಯ ಬೆಲೆ 400 ರೂಪಾಯಿಯಿಂದ 700ರೂ. ವರೆಗಿದೆ‌ ಇದೆ. ದೊಡ್ಡ ಬಾಕ್ಸ್ ಗೆ ಒಂದೂವರೆಯಿಂದ ಎರಡು ಸಾವಿರ ರೂಪಾಯಿ ಬೆಲೆ ಇದೆ. ಆದರೂ, ಜನರು ಕೊಳ್ಳುವುದನ್ನು ಕಡಿಮೆ ಮಾಡಿಲ್ಲ. ಹಾಕಿದ್ದ ಅಸಲಿಗೆ ಲಾಭ ಬಂದಾಗಿದೆ ಎಂದು ಮತ್ತೋರ್ವ ವ್ಯಾಪಾರಿ ಶಿವು ಹೇಳಿದರು.

ಪಟಾಕಿಗಳ ದುಬಾರಿಯಿಂದ ಮನೆ ಯಜಮಾನನ ಜೇಬು ಖಾಲಿ ಆಗುತ್ತಿರುವುದು ಒಂದು ಕಡೆ, ಏನೇ ಆಗಲಿ ದೀಪಾವಳಿ ಸಂಭ್ರಮ ಕಡಿಮೆಯಾಗಬಾರದು ಎಂಬ ಕಾರಣಕ್ಕಾಗಿ ಕುಟುಂಬದ ಸದಸ್ಯರೆಲ್ಲರ ನಂಬಿಕೆಯೂ ಬಲವಾಗಿ ಬೇರೂರಿದೆ.

ಮಾರುಕಟ್ಟೆಯಲ್ಲಿ ಹಸಿರು ಪಟಾಕಿ ದಾಸ್ತಾನು ಎಲ್ಲೆಡೆ ಕಂಡುಬಂದಿದೆ. ಪ್ರತಿ ಪಟಾಕಿ ಪ್ಯಾಕೆಟ್ ಮೇಲೂ ಹಸಿರು ಟ್ರೇಡ್ ಮಾರ್ಕ್ ಇದೆ.

ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ: ನಿಷೇಧಿತ ಮಾಲಿನ್ಯಕಾರಕ ಪಟಾಕಿ ಮಾರಾಟ, ಬಳಕೆ ನಿಷೇಧ- ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಆದೇಶ

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಹೆಚ್ಚು ಶಬ್ದ ಮಾಡುವ, ಮಾಲಿನ್ಯ ಉಂಟುಮಾಡುವ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಆದೇಶಿಸಿದ್ದಾರೆ.

ಸಾರ್ವಜನಿಕರು ಮಾಲಿನ್ಯಕಾರಕ, ಹೆಚ್ಚು ಶಬ್ಧ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದೆಂಬ ಸರ್ವೋಚ್ಛ ನ್ಯಾಯಾಲಯದ ‌ನಿರ್ದೇಶನದಂತೆ ದೀಪಾವಳಿ ಹಬ್ಬದ ದಿನದಂದು ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಹಚ್ಚಲು ಅವಕಾಶವಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.

ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ಧ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳು (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಯಾವುದೇ ರೀತಿಯ ಶಬ್ಧ ಉಂಟು ಮಾಡುವ ನಿಷೇಧಿತ ಪಟಾಕಿಗಳನ್ನು ಬಳಸಬಾರದು. ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು.

ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಪೋಟದಿಂದ ಅಪಾಯಗಳು ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಒಟ್ಟಾಗಿ ಸೇರಿ ಆಚರಿಸಬೇಕು.

ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು ಹಾಗೂ ಅಲ್ಲಿ ಹಸಿರು ಪಟಾಕಿಯಲ್ಲದೆ  ಯಾವುದಾದರೂ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳು ಸಾಗಾಟ ಮಾಡುತ್ತಿದ್ದಲ್ಲಿ ಕೂಡಲೇ ವಾಣಿಜ್ಯ ತೆರಿಗೆ ಇಲಾಖೆಯಿಂದ ರಾಜ್ಯದ ಗಡಿಗಳಲ್ಲಿರುವ ತನಿಖಾ ಠಾಣೆಗಳ ಮುಖಾಂತರ ನಿಷೇಧಿತ ಪಟಾಕಿಗಳು ಹಾಗೂ ಸಂಬಂಧಿತ ವಸ್ತುಗಳನ್ನು ಮುಟ್ಟುಗೊಲು ಹಾಕಿಕೊಳ್ಳಬೇಕು, ಸಾಗಾಟ ಮಾಡುವ ವಾಹನವನ್ನು ವಶಪಡಿಸಿಕೊಳ್ಳಬೇಕು ಎಂದು ಪೋಲಿಸ್ ಅಧಿಕಾರಿಗಳಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪಟಾಕಿ ಅಂಗಡಿಗಳನ್ನು ತೆರೆದ ಪ್ರದೇಶದಲ್ಲಿ ಮತ್ತು ಅಂಗಡಿಗಳ ನಡುವೆ ಸಾಕಷ್ಟು ಅಂತರ ಇರುವಂತೆ ಮತ್ತು ಅಂಗಡಿಗಳ ಮುಂದೆ ಸಾರ್ವಜನಿಕರು ಹೆಚ್ಚು ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು. ಅಗ್ನಿಶಾಮಕ ದಳದವರೂ ಜಾಗೃತರಾಗಿರಬೇಕು.

ಪಟಾಕಿಗಳನ್ನು ಹಗಲು ಸಮಯದಲ್ಲಿ ಮಾತ್ರ ಮಾರಾಟ ಮಾಡಬೇಕು. ಪಟಾಕಿ ಅಂಗಡಿಗಳ ಮಾಲೀಕರು ಯಾವುದೇ ಕಾರಣಕ್ಕೂ ಪಾಲಕರ ಸಮಕ್ಷಮ ಇಲ್ಲದೆ 18 ವರ್ಷದೊಳಗಿನ ಮಕ್ಕಳಿಗೆ ಪಟಾಕಿ ನೀಡುವಂತಿಲ್ಲ ಈ ಬಗ್ಗೆ ಮಾರಾಟಗಾರರ ತಿಳುವಳಿಕೆ ನೀಡಿ ಎಂದು ಪೊಲೀಸ್, ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!