ಕಾಡಾನೆಗಳ ಹಾವಳಿ ನಷ್ಟಕ್ಕೆ ಪರಿಹಾರ ನೀಡಿ: ರೈತ ಸಂಘದಿಂದ ಡಿಎಫ್ಒಗೆ ಮನವಿ

 

ಕೋಲಾರ: ಗಡಿಭಾಗಗಳಲ್ಲಿ ರೈತರ ಬೆಳೆ ನಾಶಮಾಡುತ್ತಿರುವ ಕಾಡಾನೆಗಳು ಹಾಗೂ ಕಾಡಂದಿಗಳ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ರೈತ ಸಂಘದಿಂದ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಕಳ್ಳರು ಬಂದು ಊರು ದೋಚಿದ ಮೇಲೆ ಊರ ಬಾಗಿಲು ಹಾಕಿದರೂ ಎಂಬ ಗಾದೆಯಂತೆ ಕಾಡಾನೆಗಳಿಂದ ರೈತರ ಬೆವರು ಸುರಿಸಿ ಬೆಳೆದ ಬೆಳೆ ನಾಶವಾದ ನಂತರ ಪತ್ತೆಯಾಗುವ ಅರಣ್ಯ ಅಧಿಕಾರಿಗಳ ರೈತ ವಿರೋಧಿ ದೋರಣೆ ಹಾಗೂ ಗಡಿಭಾಗದ ರೈತರ ಪಾಲಿಗೆ ಯಮಕಿಂಕರಾಗಿರುವ ಜನ ಪ್ರತಿನಿಧಿಗಳ ವಿರುದ್ದ ಗಡಿಭಾಗದ ನೊಂದ ರೈತ ಅಪ್ಪೋಜಿರಾವ್, ಶ್ರೀರಾಮಪ್ಪ ಆಕ್ರೋಷ ವ್ಯಕ್ತಪಡಿಸಿದರು.

ಮುಂಗಾರು ಮಳೆಯಿಲ್ಲದೆ ಬೆಳೆ ನಷ್ಟವಾಗಿ ಹಿಂಗಾರು ಮಳೆಯಿಂದ ಕೈಗೆ ಬಂದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಜೊತೆಗೆ ಅಲ್ಪ ಸ್ವಲ್ಪ ಉಳಿದಿರುವ ಬೆಳೆಯನ್ನು ಕಾಡಾನೆಗಳು ರಾತ್ರೋ ರಾತ್ರಿ ನಾಶ ಮಾಡಿದರೆ ಉಳಿಕೆ ಇರುವ ಬೆಳೆಯನ್ನು ಕಾಡು ಹಂದಿಗಳು ಸಂಪೂರ್ಣವಾಗಿ ನಾಶಮಾಡಿ ರೈತರ ಬದುಕನ್ನು ಬೀದಿಗೆ ಬಿದ್ದಿದ್ದರೂ ಸರ್ಕಾರಗಳು ರೈತರ ಜೀವನದ ಜೊತೆ ಚಲ್ಲಾಟವಾಡಿದರೆ ಮತ್ತೊಂದಡೆ ಕಷ್ಟಾಪಟ್ಟು ರಾತ್ರಿ ಹಗಲು ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ರಾತ್ರೋರಾತ್ರಿ ಕಾಡಾನೆಗಳು ಸಂಪೂರ್ಣವಾಗಿ ನಾಶ ಮಾಡುತ್ತಿದ್ದು, ಬೆಳೆಯನ್ನು ರಕ್ಷಣೆ ಮಾಡದೆ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳದೆ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಗಡಿಭಾಗದ ರೈತರ ಕಾಡಾನೆಗಳ ಹಾವಳಿಗೆ ಶಾಶ್ವತ ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪ ಮಾಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಗಡಿಭಾಗದ ರೈತರ ಪಾಲಿಗೆ ಕ್ಷೇತ್ರದ ಜನ ಪ್ರತಿನಿಧಿಗಳು ಅರಣ್ಯ ಅಧಿಕಾರಿಗಳು ಇದ್ದು, ಇಲ್ಲದಂತಾಗಿದ್ದಾರೆ. ಕಾಡಾನೆಗಳ ಹಾಳಿಯಿಂದ ಬೆಳೆ ನಷ್ಟವಾಗುತ್ತಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ರೈತರ ಕಷ್ಟಗಳಿಗೆ ಸ್ಪಂಧಿಸುತ್ತಿಲ್ಲ. ಒಂದು ಕಡೆ ಬೆಳೆಯು ಇಲ್ಲ ಮತ್ತೊಂದು ಕಡೆ ಪರಿಹಾರವು ಇಲ್ಲದೆ ಜಾತಕ ಪಕ್ಷಿಗಳಂತೆ ರೈತರು ಕಣ್ಣೀರು ಸುರಿಸುತ್ತಿದ್ದರೂ, ಮನ ಕರಗದ ಅಧಿಕಾರಿಗಳ ಜನ ಪ್ರತಿನಿಧಿಗಳ ರೈತ ವಿರೋಧಿ ದೋರಣೆಗೆ ಆಕ್ರೋಷ ವ್ಯಕ್ತಪಡಿಸಿದರು.

ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಕಾಡಾನೆಗಳ ಹಾವಳಿಗೆ ಅಭಿವೃದ್ದಿಪಡಿಸಿರುವ ಸೋಲರ್ ನಿರ್ವಹಣೆ ಇದ್ದು ಇಲ್ಲದಂತಾಗಿದೆ. ಗಡಿಭಾಗದಲ್ಲಿ ಸೋಲಾರ್ ಕಂಬಗಳನ್ನೇ ನೆಲಕ್ಕೆ ಉರುಳಿಸಿ ಕಟಾವಿಗೆ ಬಂದಿದ್ದ, ರಾಗಿ, ಭತ್ತ ಮತ್ತಿತರ ವಾಣಿಜ್ಯ ಬೆಳೆಗಳನ್ನು ನಾಶ ಮಾಡಿದ್ದರೂ ಸ್ಥಳಕ್ಕೆ ಬೇಟಿ ನೀಡದ ತಾಲ್ಲೂಕಾಡಳಿತದ ವಿರುದ್ದ ಕಿಡಿ ಕಾರಿದರು.

ಒಂದು ವಾರದೊಳಗೆ ಕಾಡಾನೆ ಹಾಗೂ ಕಾಡು ಹಂದಿಗಳ ಹಾವಳಿಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ವಿತರಣೆ ಮಾಡಿ ಕಾಡಾನೆಗಳನ್ನು ನಿಯಂತ್ರಿಸಲು ವಿಶೇಷ ತಂಡ ರಚನೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಶಾಶ್ವತ ಪರಿಹಾರ ಕೊಡಿ ಇಲ್ಲವೆ ಆನೆ ಹಿಡಿಯಲು ಆದೇಶವನ್ನಾದರೂ ಕೊಡಿ ಸ್ವಾಮಿ ಇಲ್ಲವಾದರೆ ಬುಡ್ಡಿ ದೀಪಗಳೊಂದಿಗೆ ಶಾಸಕರ ಮತ್ತು ಅರಣ್ಯ ಅಧಿಕಾರಿಗಳ ಮನೆ ಮುಂದೆ ಹೋರಾಟ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯ ಜೊತೆಗೆ ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು, ಗಡಿಭಾಗದ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಡಾನೆಗಳಿಂದ ರೈತರ ಬೆಳೆ ಪ್ರಾಣ ರಕ್ಷಣೆ ಮಾಡುವ ಜೊತೆಗೆ ದ್ವನಿವರ್ದಕ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸಿ ಬೆಳೆ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಗೊಲ್ಲಹಟ್ಟಿ ಲಕ್ಷಣ್, ಗೋವಿಂದಪ್ಪ, ಸುರೇಶ್, ಕಾಮುಸಮುದ್ರ ಹೋ.ಅ ಮುನಿಕೃಷ್ಣ, ಹಸಿರು ಸೇನೆ ಜಿಲ್ಲಾದ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಯಾರಂಘಟ್ಟ ಗೀರಿಶ್, ಶೈಲಜ, ರಾಧ, ಶೋಭ, ಚೌಡಮ್ಮ, ಲಕ್ಷಮ್ಮ, ಸುಗುಣ, ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!