
ಮುಳಬಾಗಿಲು ತಾಲ್ಲೂಕಿನ ಯಳಚೇಪಲ್ಲಿ ಗ್ರಾಮಕ್ಕೆ ಹೋಗುತ್ತಿರುವ ಬಸ್ ಅನ್ನು ನಿಲ್ಲಿಸಿರುವುದು ವಿರೋಧಿಸಿ, ಈ ಕೂಡಲೇ ಸರ್ಕಾರಿ ಬಸ್ ಸೇವೆ ಕಲ್ಪಿಸಕೊಡಬೇಕೆಂದು ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡಲಾಯಿತು.
ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಮುಳಬಾಗಿಲು ತಾಲ್ಲೂಕು ಸಮಿತಿ ವತಿಯಿಂದ ಹಲವು ವರ್ಷಗಳಿಂದ ಸಮರ್ಪಕವಾಗಿ ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಹೋರಾಟಗಳು ನಡೆಸಿಕೊಂಡು ಬರುತ್ತಿದೆ. ಆದರೂ, ಮುಳಬಾಗಿಲು ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಸುಮಾರು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುತ್ತಿದ್ದು, ಸರಿಯಾದ ಸಮಯಕ್ಕೆ ಸರ್ಕಾರಿ ಬಸ್‌ಗಳ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಬಸ್ ಪಾಸ್ ಇದ್ದರೂ ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜಿಗೆ ಸರಿಯಾದ ಸಮಯ್ಯಕೆ ನಗರಕ್ಕೆ ಬರಲು ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಎಸ್ ಎಫ್ ಐ ತಾಲ್ಲೂಕು ಕಾರ್ಯದರ್ಶಿಯಾದ ಸುದರ್ಶನ್ ಮಾತನಾಡಿ, ತಾಯಲೂರು ವ್ಯಾಪ್ತಿಯಲ್ಲಿರುವ ಯಳಚೇಪಲ್ಲಿಗೆ ಕರೋನಾ ಸಮಯದ ಮುಂಚೆ ಬೆಳಿಗ್ಗೆ ಸಂಜೆ ಸರ್ಕಾರಿ ಬಸ್ ಸೌಲಭ್ಯವಿತ್ತು. ಆದರೆ, ಈಗ ಆ ಬಸ್ ಅನ್ನು ಕಳುಹಿಸುತ್ತಿಲ್ಲ, ವಿದ್ಯಾರ್ಥಿಗಳು ಸುಮಾರು 3-4 ಕಿ.ಮೀ. ನಡೆದುಕೊಂಡು ಬಂದು ಅಗರ ಗ್ರಾಮದ ಬಸ್ ತಂಗುದಾಣದಲ್ಲಿ ಬಸ್ ಹತ್ತುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಬೆಳಿಗ್ಗೆ ಮತ್ತು ಸಾಯಂಕಾಲ ಯಳಚೇಪಲ್ಲಿ ಗ್ರಾಮಕ್ಕೆ ಹಿಂದಿನಂತೆಯೇ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು ಇಲ್ಲವೇ ತಾಲ್ಲೂಕು ಸರ್ಕಾರಿ ಬಸ್ ನಿಲ್ದಾನದಿಂದ ತಾಲ್ಲೂಕು ಕೆ ಎಸ್ ಆರ್ ಟಿ ಸಿ ಘಟಕದವರೆಗೂ ಬೃಹತ್ ಪಾದಯಾತ್ರೆಯ ಮೂಲಕ ಡಿಪೋ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ವ್ಯವಸ್ಥಾಪಕರು, ಮಧ್ಯಾಹ್ನದ ಬಸ್ ಸೌಲಭ್ಯವನ್ನು ಕಲ್ಪಿಸಿಕೊಡುತ್ತೇವೆ ಹಾಗೂ ಬೆಳಿಗ್ಗೆ 8 ಗಂಟೆಗೆ ಕಳುಹಿಸುವ ಬಸ್ ಅನ್ನು 1 ವಾರದ ಒಳಗೆ ಕಲ್ಪಿಸಿಕೊಡುತ್ತೇವೆ ಎಂದು ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಎಸ್ ಎಫ್ ಐ ತಾಲ್ಲೂಕು ಅಧ್ಯಕ್ಷರಾದ ಅರ್ಚನಾ ಜಿಲ್ಲಾ ಸಮಿತಿ ಸದಸ್ಯರಾದ ಅಜಯ್ ಕುಮಾರ್ ತಾಲ್ಲೂಕು ಸಮಿತಿ ಸದಸ್ಯರಾದ ರಾಕೇಷ್ ಹಾಗೂ ನಾಗೇಷ್ ಮತ್ತು ಎಸ್ ಎಫ್ ಐ ಮುಖಂಡರು ಹಾಗೂ ಯಳಚೇಪಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು.