ಸತತ ಮಳೆ….ಬುಡದಲ್ಲೇ ಕೊಳೆಯುತ್ತಿರುವ ಅಲಂಕಾರಿಕ ಹೂ: ಕೊಳೆತ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿದ ರೈತ

ರಾಜ್ಯದ ಹಲವು ಕಡೆ ಕಳೆದ ಕೆಲ ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಜನ‌ಜೀವನ ಅಸ್ತವ್ಯಸ್ಥಗೊಂಡಿದೆ.

ಕಳೆದೆರಡು ತಿಂಗಳಿಂದ ಮಳೆಯಿಲ್ಲದೆ ಪರದಾಡುತ್ತಿದ್ದ ರೈತರು.. ಈಗ ಬಿಟ್ಟು ಬಿಡದೆ ಧೋ ಎಂದು ಸುರಿಯಿತ್ತಿರುವ ಮಳೆಗೆ ಹೈರಣಾಗಿ ಹೋಗಿದ್ದಾರೆ. ಅರೆಬರೆ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಈಗ ಮಳೆಯಿಂದ ಅದು ಕೂಡ ಕೈತಪ್ಪಿ ಹೋಗುವ ಭೀತಿಯಲ್ಲಿದ್ದಾರೆ. ರೈತರು ಬೆಳೆದ ಬೆಳೆಗಳು ಅತಿಯಾದ ತೇವಾಂಶದಿಂದ ನೆಲಕಚ್ಚುತ್ತಿವೆ.

ಅದೇ ರೀತಿ.. ಬೆಂಗಳೂರು‌ ನಗರದ ಕೂಗಳತೆ ದೂರಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿಯಲ್ಲಿ ರೈತ ತಾನು ಬೆಳೆದ ಹೂ ಗಿಡಳನ್ನು ಬುಡಸಮೇತ ಕಿತ್ತು ಹಾಕಿ ಸಂಕಷ್ಟಕ್ಕೀಡಾಗಿದ್ದಾನೆ.

ಶ್ರೀಕಾಂತ್ ಮತ್ತು ನರಸೇಗೌಡ ಎಂಬ ರೈತರು ಒಂದು ಎಕರೆ ಜಮೀನಿನಲ್ಲಿ ಬೆಳೆದ ಸಿಲೋಷಿಯಾ ಎಂಬ ಅಲಂಕಾರಿಕ ಹೂಗಳು ಮಳೆಯಿಂದಾಗಿ ಬುಡದಲ್ಲೇ ಕೊಳೆತಿವೆ‌. ಹಾಗಾಗಿ ದಿಕ್ಕು ತೋಚದೆ, ಹೂಗಿಡಗಳನ್ನು ಆಳುಗಳನ್ನಿಟ್ಟು ಕಿತ್ತು ಹಾಕಿಸಿದ್ದಾರೆ…

ಒಂದು ಎಕರೆ ಜಮೀನಿನಲ್ಲಿ, ಸುಮಾರು 8 ಲಕ್ಷ ಹಣ ಖರ್ಚು ಮಾಡಿ ಸಿಲೋಷಿಯಾ ಎಂಬ ಅಲಂಕಾರಿಕ ಹೂಗಳನ್ನು ಬೆಳೆಯಲಾಗಿತ್ತು. ಈ ಹೂಗಳನ್ನು ಬೆಂಗಳೂರು ಕೊಲ್ಕತ್ತಾ, ಬಾಂಬೆ, ಮುಂಬೈ, ಹೈದರಾಬಾದ್, ರಾಜ್ಯಗಳಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡಲಾಗುತ್ತಿತ್ತು. ಅಲಂಕಾರಿಕ ಹೂಗಳಾಗಿದ್ದರಿಂದ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿತ್ತು. ಆದರೆ, ಸತತವಾಗಿ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಸಂಪೂರ್ಣ ಬೆಳೆ ನಷ್ಟವಾಗಿದೆ. ಒಂದು ಬಾರಿಯೂ ಕಟಾವು ಮಾಡದೆ, ಈಗ ತಿಪ್ಪೆಗೆ ಹಾಕುವಂತೆ ಆಗಿದೆ.

ಬೆಳೆ ಕೈ ಸೇರಲು 3 ತಿಂಗಳ ಕಾಲ ಮಗುವಿನ ರೀತಿ ಪೋಷಣೆ ಮಾಡಬೇಕಾಗುತ್ತದೆ. ಕಷ್ಟಪಟ್ಟು ಬೆಳೆದ ಬೆಳೆ ಇನ್ನೇನು ಕೈ ಸೇರುತ್ತದೆ ಎನ್ನುವಷ್ಟರಲ್ಲಿ ಈ ರೀತಿ ಪ್ರಕೃತಿ ವಿಕೋಪದಿಂದ ನಾಶವಾದರೆ ರೈತರು ಬದುಕುವುದು ಹೇಗೆ ಎಂದು ರೈತ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕೂಡ ಯಾರೂ ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ರೈತ  ನರಸೇಗೌಡ ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಾರೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಮಗುವಿನ ರೀತಿ ಬೆಳೆದಿದ್ದ ಹೂ ಗಿಡಗಳನ್ನು ಇವತ್ತು ರೈತ ತನ್ನ ಕೈಯಾರೆ ಕಿತ್ತು ಹಾಕುವಂತ ಸ್ಥಿತಿ ಬಂದಿದ್ದು ಮಾತ್ರ ವಿಪರ್ಯಾಸ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ‌ ಪರಿಶೀಲನೆ ಮಾಡಿ ನಷ್ಟ ಪರಿಹಾರ ನೀಡುತ್ತಾ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!