
ಕೋಲಾರ: ಮೊಬೈಲ್ ಮುಖಾಂತರ ಮಕ್ಕಳಿಗೆ ಹೋಮ್ ವರ್ಕ್ ನೀಡಿ ಆರೋಗ್ಯವನ್ನು ಹದಗೆಡಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರೈತಸಂಘದಿಂದ ಶಿಕ್ಷಣ ಇಲಾಖೆಯ ಎದುರು ಮೊಬೈಲ್‌ಗಳ ಸಮೇತ ಹೋರಾಟ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ತಾರಮ್ಮ ಎಂಬ ಗಾಧೆಯಂತೆ ಮೊಬೈಲ್ ಇಲ್ಲದ ಮಕ್ಕಳ ವಿದ್ಯಾಭ್ಯಾಸ ಇಲ್ಲದಂತಾಗಿದೆ ಇಂದಿನ ಶಿಕ್ಷಣ ವ್ಯವಸ್ಥೆ. ಲಕ್ಷಲಕ್ಷ ಡೊನೇಶನ್ ಪಡೆದು ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಬೇಕಾದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಹೋಮ್ ವರ್ಕ್ ಹೆಸರಿನಲ್ಲಿ ಮಕ್ಕಳಿಗೆ ಮೊಬೈಲ್ ಎಂಬ ಮಹಾ ಪಿಡುಗಿಗೆ ಮಕ್ಕಳ ಭವಿಷ್ಯವನ್ನು ನೀಡುವ ಮುಖಾಂತರ ಹಾದಿ ತಪ್ಪಲು ನೇರವಾಗಿ ಕುಮ್ಮಕ್ಕು ನೀಡುವ ಜೊತೆಗೆ ಮೊಬೈಲ್ ಕಂಪನಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ಸಂಶಯವನ್ನು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ವ್ಯಕ್ತಪಡಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಝೆರಾಕ್ಸ್ ಮಾಡಲು ಯಂತ್ರೋಪಕರಣಗಳು ಇಲ್ಲದಿದ್ದರೆ ಹೇಳಿಬಿಡಲಿ, ಪೋಷಕರೇ ಪ್ರತಿ ಶಾಲೆಗೆ ತಲಾ ೧೦ ಯಂತ್ರಗಳನ್ನು ಉಚಿತವಾಗಿ ನೀಡುತ್ತೇವೆ. ನಮ್ಮ ಮಕ್ಕಳಿಗೆ ಮೊಬೈಲ್‌ನಲ್ಲಿ ಹೋಮ್ ವರ್ಕ್ ಬೇಡ. ಝೆರಾಕ್ಸ್ ಪ್ರತಿಗಳು ನೀಡುವ ಮುಖಾಂತರ ಮಕ್ಕಳ ಆರೋಗ್ಯ ರಕ್ಷಣೆ ಮಾಡಲಿ ಎಂದು ಒತ್ತಾಯಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ತರಗತಿಯಲ್ಲಿ ಬೋಧನೆ ಮಾಡಿರುವ ಪಠ್ಯದ ಜತೆಗೆ ಹೆಚ್ಚುವರಿಯಾಗಿ ಚಟುವಟಿಕೆಗಳನ್ನು ಮಾಡಿಕೊಂಡು ಬರಲು ಶಿಕ್ಷಕರು ಸೂಚಿಸಿದ್ದಾರೆ. ಅದನ್ನು ಮೀರಿ ಹೆಚ್ಚು ಚಟುವಟಿಕೆಗಳನ್ನು ಮಾಡಿಸಬೇಕು ಎಂದು ಪೋಷಕರಿಗೂ ಮೊಬೈಲ್ ಮೂಲಕ ಸಂದೇಶ ಕಳುಹಿಸಿ ನಿರ್ದೇಶನ ನೀಡುತ್ತಿದ್ದಾರೆ. ಇದು ಮಕ್ಕಳ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಕೂಲಿಕಾರ್ಮಿಕ ಮಹಿಳೆ ಐತಾಂಡಹಳ್ಳಿ ಶೈಲಜಾ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕರು, ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ. ಮಕ್ಕಳ ವಯಸ್ಸಿನ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಶಿಕ್ಷಕರು ನೀಡಬೇಕು. ಇದಕ್ಕೆ ಶಿಕ್ಷಣ ಇಲಾಖೆಯ ಸುತ್ತೋಲೆ ಸಹ ಇದೆ, ಆದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗದೆ ಮಕ್ಕಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೋವಿಡ್‌ಗೂ ಮುಂಚೆ ಶಿಕ್ಷಕರು ಮಕ್ಕಳಿಗೆ ಅಗತ್ಯವಾಗಿ ಬೇಕಾಗಿದ್ದ ಶಿಕ್ಷಣವನ್ನು ತರಗತಿಮಟ್ಟದಲ್ಲೇ ನೀಡುತ್ತಿದ್ದರು. ಕೋವಿಡ್ ಕಾಲದಲ್ಲಿ ಮಕ್ಕಳಿಗೆ ವೆಬಿನರ್, ಅನ್ ಲೈನ್, ಲೈವ್ ತರಗತಿಗಳು ಅಂತೇಳಿ, ಶಿಕ್ಷಕರೆ ಮಕ್ಕಳಿಗೆ ಮೊಬೈಲ್ ಅಭ್ಯಾಸ ಮಾಡಿಸಿದರು. ಅದನ್ನು ಈಗಲೂ ಮುಂದುವರೆಸಿಕೊAಡು ಹೋಗಿದ್ದು, ಹೋಮ್ ವರ್ಕ್ ಹೆಸರಿನಲ್ಲಿ ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಿಂತ ಪೋಷಕರಿಗೆ ಹಣ ಸುಲಿಗೆ ಮಾಡುವುದೇ ಉದ್ದೇಶ. ಮಕ್ಕಳಿಗೆ ಹೆಚ್ಚುವರಿ ಕೆಲಸ ನೀಡುವ ಮೂಲಕ ನಿಮ್ಮಮಕ್ಕಳಿಗೆ ಶಿಕ್ಷಕರು ಹಗಲು ಇರಿಳು ಶ್ರಮಿಸುತ್ತಿದ್ದಾರೆ. ಇದಕ್ಕೆ ಗೌರವ ಕೊಡಲೇ ಬೇಕು ಅಂತ ದುಡ್ಡು ಪೀಕುತ್ತಿದ್ದಾರೆ, ಇದೆಲ್ಲ ಶಿಕ್ಷಣಾಧಿಕಾರಿಗಳ ಗಮನಕ್ಕೆ ಇದ್ದರು ಏನು ಕಾಣದ ಚಾಣಕುರುಡರಂತೆ ವರ್ತಿಸುತ್ತಿದ್ದಾರೆಂದು ದೂರು ನೀಡಿದರು.
ಹೆಚ್ಚುವರಿ ಚಟುವಟಿಕೆಗಳನ್ನು ನೀಡುವುದರಿಂದ ಮಕ್ಕಳಿಗೆ ತಲೆ ನೋವು, ಜ್ವರಕ್ಕೆ ಗುತ್ತಾಗುವಂತ ಪರಿಸ್ಥಿತಿ ಎದುರಾಗಿದೆ. ಮಗು ಒಂದು ದಿನ ಶಾಲೆಗೆ ತಪ್ಪಿಸಿಕೊಂಡರು ಸಹ ಬೆದರಿಕೆ ಹಾಕಿ ಮಕ್ಕಳು ಖಿನ್ನತೆಗೆ ಒಳಗಾಗುವಂತೆ ಮಾಡುತ್ತಾರೆ. ಇನ್ನಾದರು ಶಿಕ್ಷಣಾಧಿಕಾರಿಗಳು ಎಚ್ಚೆತ್ತುಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳವರಿಗೆ ಎಚ್ಚರಿಕೆ ನೀಡಿ ಮಕ್ಕಳ ಆರೋಗ್ಯ ಕಾಪಾಡ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರ ಶಿಕ್ಷಣ ಸಚಿವರ ಆದೇಶದಂತೆ ಯಾವುದೇ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಮೊಬೈಲ್ ಮೂಲಕ ಹೋಮ್ ವರ್ಕ್ ನೀಡುವಂತಿಲ್ಲ ಎಂಬ ಆದೇಶವನ್ನು ಎಲ್ಲಾ ಶಾಲೆಗಳಿಗೆ ನೀಡಿದ್ದೇವೆ. ಆದರೂ ಆದೇಶವನ್ನು ಲೆಕ್ಕಿಸದೆ ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಮತ್ತೊಮ್ಮೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೋಟೀಸ್ ನೀಡಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜಗೌಡ, ಸುಪ್ರೀಂ ಚಲ, ಚಂದ್ರಪ್ಪ, ಶಶಿಕುಮಾರ್, ಯಲ್ಲಣ್ಣ, ಹರೀಶ್, ತಾಲೂಕು ಅಧ್ಯಕ್ಷ ಶಿವಾರೆಡ್ಡಿ, ರತ್ನಮ್ಮ, ಗೌರಮ್ಮ, ವೆಂಕಟಲಕ್ಷ್ಮೀ ಕಾಂತಮ್ಮ ಮುಂತಾದವರಿದ್ದರು.