ಉತ್ತರ ಪ್ರದೇಶದ ಗಾಜಿಯಾಬಾದ್ನ ಪೊದೆಗಳಲ್ಲಿ ಅನಾಥವಾಗಿ ಇದ್ದ ನವಜಾತ ಹೆಣ್ಣು ಮಗುವನ್ನು ಶನಿವಾರ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಣೆ ಮಾಡಿ ದತ್ತು ಪಡೆದಿದ್ದಾರೆ.
ಪೊದೆಯಿಂದ ನವಜಾತ ಮಗುವೊಂದು ಅಳುವ ಸದ್ದು ಕೇಳಿಸಿತ್ತು. ಇದನ್ನು ಆಲಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಪುಷ್ಪೇಂದ್ರ ಸಿಂಗ್ ಅವರು ನವಜಾತ ಹೆಣ್ಣು ಮಗುವನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಪುಷ್ಪೇಂದ್ರ ಸಿಂಗ್ ಅವರು ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಪೋಷಕರ ಮಾಹಿತಿ ದೊರಕಲಿಲ್ಲ. ಇಷ್ಟೇ ಅಲ್ಲ ಮಗುವಿನ ಆರೈಕೆಗೆ ಯಾರೂ ಮುಂದೆ ಬರಲಿಲ್ಲ. ಕೊನೆಯದಾಗಿ ಸಬ್ ಇನ್ಸ್ಪೆಕ್ಟರ್ ಪೊದೆಯಿಂದ ರಕ್ಷಿಸಿದ ಮಗುವನ್ನು ಕಾನೂನಿನ ಪ್ರಕ್ರಿಯೆ ಪೂರ್ಣಗೊಳಿಸಿ ದತ್ತು ಪಡೆದಿದ್ದಾರೆ. ದತ್ತು ಪಡೆದಿದ್ದಾರೆ. ಇದೀಗ ದತ್ತು ಪಡೆದು ನವಜಾತ ಮಗುವಿನ ಜೊತೆ ದಸರಾ ಹಬ್ಬ ಆಚರಿಸಿದ ಅವರು, ನವರಾತ್ರಿ ಹಬ್ಬಕ್ಕೆ ಲಕ್ಷ್ಮಿ ಮನೆಗೆ ಆಗಮಿಸಿದ್ದಾಳೆ. ಇದಕ್ಕಿಂತ ಸಂತೋಷ ಇನ್ನೇನಿದೆ ಎಂದು ಪುಷ್ಪೇಂದ್ರ ಸಿಂಗ್ ಹೇಳಿದ್ದಾರೆ.
2018ರಲ್ಲಿ ಮದುವೆಯಾಗಿರುವ ಪುಷ್ಪೇಂದ್ರ ಸಿಂಗ್ಗೆ ಮಕ್ಕಳಿಲ್ಲ. ಪತ್ನಿ ಜೊತೆ ಮಾತುಕತೆ ಬಳಿಕ ರಕ್ಷಿಸಿದ ಹೆಣ್ಣು ಮಗುವನ್ನು ಕಾನೂನು ಪ್ರಕ್ರಿಯೆ ಮೂಲಕ ದತ್ತು ಪಡೆದಿದ್ದಾರೆ.