ದೂರದೃಷ್ಟಿಯುಳ್ಳ, ಕೊಡುಗೈ ದಾನಿ, ಉದ್ಯಮ‌ ಲೋಕದ ದಿಗ್ಗಜ, ಸರಳ ಸಜ್ಜನಿಕೆ ವ್ಯಕ್ತಿತ್ವದ ರತನ್ ಟಾಟಾ ಇನ್ನಿಲ್ಲ

ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಸೋಮವಾರವಷ್ಟೇ, ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಕೈಗಾರಿಕೋದ್ಯಮಿ ತಮ್ಮ ಆರೋಗ್ಯದ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ್ದರು. ಆದರೆ, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದ ಜಮ್‌ಸೆಟ್ಜಿ ಟಾಟಾ ಅವರ ಮರಿ ಮೊಮ್ಮಗ ರತನ್ ನೇವಲ್ ಟಾಟಾ. ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಸಿದ್ದು, ಇವರ ತಂದೆ ನೇವಲ್ ಟಾಟಾ ಮತ್ತು ತಾಯಿ ಸೂನಿ ಟಾಟಾ.

ಅಚ್ಚರಿ ವಿಷಯವಾದರೂ ರತನ್‌ ಟಾಟಾ ಅವರು ತಮ್ಮ ಜೀವನದಲ್ಲಿ ಮದುವೆಯೇ ಆಗಲಿಲ್ಲ. ಈ ಹಿಂದೆ ನಾಲ್ಕೈದು ಬಾರಿ ಮದುವೆ ಚರ್ಚೆ ಬಂದಿತ್ಥಾದರೂ ರತನ್ ಅವರು ಮದುವೆಗೆ ಒಪ್ಪಲಿಲ್ಲ ಎನ್ನಲಾಗಿದೆ.

1961 ರಲ್ಲಿ ತಮ್ಮ ವೃತ್ತಿ ಜೀವನವನ್ನು ರತನ್‌ ಟಾಟಾ ಪ್ರಾರಂಭಿಸಿದರು. ಟಾಟಾ ಸ್ಟೀಲ್ಸ್‌ ಮಹಡಿಯಲ್ಲಿ ಸ್ವತಃ ತಾವೇ ಕೆಲಸ ಮಾಡುವ ಮೂಲಕ ತಳಮಟ್ಟದಿಂದ ಕೆಲಸ ಕಲಿತು ಅದರ ಅನುಭವದಿಂದ ಮೇಲೆ ಬಂದರು. ಇದು ಅವರ ಭವಿಷ್ಯದ ನಿರ್ಧಾರಗಳಿಗೆ ದೊಡ್ಡಮಟ್ಟಿನಲ್ಲಿ ನೆರವಾಯಿತು ಎಂದು ಅವರೇ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಜನರಿಗೆ ಅನುಕೂಲವಾಗುವ ಮನೆ ಮಾತಾಗಿರುವ ಟಾಟಾ ಟೀ, ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಸ್ಥಾಪಿಸಿದ್ದು ರತನ್‌ ಟಾಟಾ. ಉದ್ಯಮ ಸಾಧನೆ, ಸೇವಾ ಕಾರ್ಯಕ್ಕೆ ಮೆಚ್ಚಿ ಕೇಂದ್ರ ಸರ್ಕಾರವು ಪದ್ಮಭೂಷಣ, ಪದ್ಮ ವಿಭೂಷಣ ನೀಡಿ ಗೌರವಿಸಿದೆ.

2024 ರಲ್ಲಿ ಅವರ ಒಟ್ಟಾರೆ ನಿವ್ವಳ ಆಸ್ತಿ ಮೊತ್ತವು 3800 ಕೋಟಿ ರೂಪಾಯಿ ಆಗುತ್ತದೆ. ರತನ್‌ ಟಾಟಾ ಅವರು ತಮ್ಮ ಸಂಪಾದನೆಯ ಶೇ 60 ಕ್ಕೂ ಹೆಚ್ಚು ಹಣವನ್ನು ಟಾಟಾ ಚಾರಿಟಿಗೆ (ದಾನ) ನೀಡುತ್ತಿದ್ದರು. ದೇಶದ ಕೋವಿಡ್‌ ಹೋರಾಟಕ್ಕೆ 1,500 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

Leave a Reply

Your email address will not be published. Required fields are marked *