ಚಿನ್ನ ಪಾಲೀಶ್ ಮಾಡುವುದಾಗಿ 384 ಗ್ರಾಂ ಚಿನ್ನ ಕದ್ದ ಆರೋಪಿ: ಬಂಧಿತನಿಂದ 38 ಲಕ್ಷ ಮೌಲ್ಯದ ವಸ್ತುಗಳನ್ನು ವಶ

ಹಲಸೂರು ಪೊಲೀಸ್ ಠಾಣೆಯ ಅಧಿಕಾರಿಗಳು ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಮಾಹಿತಿ ನೀಡಿದರು. ಚಿನ್ನದ ಮಳಿಗೆ ಮಾಲೀಕರಿಗೆ ಚಿನ್ನ ಪಾಲೀಶ್ ಮಾಡುವುದಾಗಿ ಹೇಳಿ ನಂತರ ಚಿನ್ನದ ಸಮೇತ ಆರೋಪಿ ಪಲಾಯನ ಆಗುತ್ತಿದ್ದ. ಅರೋಪಿ ಬಂಧನದಿಂದ 384 ಗ್ರಾಂ ಚಿನ್ನ ಹಾಗೂ 10,99,779 ನಗದು ಸೇರಿ ಒಟ್ಟು 38 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮೊಬೈಲ್, ಲ್ಯಾಪ್ ಟಾಪ್ ಹಾಗೂ ದ್ವಿಚಕ್ರವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಅಧಿಕಾರಿಗಳು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು 34 ಲ್ಯಾಪ್ ಟಾಪ್, 28 ಮೊಬೈಲ್ ಹಾಗೂ 4 ದ್ವಿಚಕ್ರವಾಹನ ಸೇರಿ 23 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ವಸ್ತುಗಳ ಪೈಕಿ 16 ಲ್ಯಾಪ್ ಟಾಪ್ ಗಳು, 4 ದ್ವಿಚಕ್ರವಾಹನ ಹಾಗೂ 11 ಮೊಬೈಲ್ ಫೋನ್ ಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಇ ಕಳವು ಪ್ರಕರಣಗಳಿಗೆ ಸಂಬಂಧಿಸಿವೆ. ಈ ಪ್ರಕರಣದ ಮತ್ತಷ್ಟು ತನಿಖೆ ಜಾರಿಯಲ್ಲಿದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಪ್ರಯತ್ನದಲ್ಲಿದ್ದ ಇಬ್ಬರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 13 ಲಕ್ಷ ಮೌಲ್ಯದ 22 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಜತೆಗೆ ಗಾಂಜಾ ವ್ಯಾಪಾರಕ್ಕೆ ಬಳಸಿದ್ದ ಮೊಬೈಲ್ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರಿನ ಗಾಜು ಒಡೆದು ಅದರೊಳಗಿದ್ದ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆ ಅಧಿಕಾರಿಗಳು ಆರೋಪಿಯೊಬ್ಬನನ್ನು ಬಂಧಿಸಿದ್ದು, ಕಾರ್ಯಾಚರಣೆಯಲ್ಲಿ ದ್ವಿಚಕ್ರವಾಹನ ಹಾಗೂ 17 ಲ್ಯಾಪ್ ಟಾಪ್ ಸೇರಿದಂತೆ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಸ್ತುಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 5 ಪ್ರಕರಣಗಳಿಗೆ ಸಂಬಂಧಿಸಿವೆ ಎಂದರು.

ಸರಣಿ ದ್ವಿಚಕ್ರ ವಾಹನ ಹಾಗೂ ಲ್ಯಾಪ್ ಟಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಅಧಿಕಾರಿಗಳು ಅಂತರ್ ರಾಜ್ಯ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 3 ಲ್ಯಾಪ್ ಟಾಪ್, 1 ಟ್ಯಾಬ್ ಹಾಗೂ 5 ದ್ವಿಚಕ್ರವಾಹನ ಸೇರಿದಂತೆ ₹12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 5 ದ್ವಿಚಕ್ರವಾಹನ ಹಾಗೂ 2 ಲ್ಯಾಪ್ ಟಾಪ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದರು.

Leave a Reply

Your email address will not be published. Required fields are marked *