ಕೃಷಿಯಲ್ಲಿ ಡ್ರೋನ್ ಬಳಕೆ: ಏನಿದರ ಉಪಯೋಗ…..?

ದೊಡ್ಡಬಳ್ಳಾಪುರ: ಆಧುನಿಕ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸಿ ಕೀಟನಾಶಕಗಳು ಮತ್ತು ಬೆಳೆ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹಾಗು ನಿಖರವಾಗಿ ಸಿಂಪಡಿಸುವಿಕೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಸೊಣ್ಣಪ್ಪನಹಳ್ಳಿ ಗ್ರಾಮದಲ್ಲಿರುವ ಆಯೋಜಿಸಿದ್ದ ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆ ಹಾಗೂ ಕೃಷಿಯಲ್ಲಿ ಡ್ರೋನ್ ಬಳಕೆ ಕುರಿತು ತರಬೇತಿ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ 141 ಕೋಟಿಗಳಿದ್ದು, ಏರುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆಹಾರ ಬೆಳೆಗಳ “ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಪ್ರಸ್ತುತ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಅತಿ ದೊಡ್ಡ ಸಮಸ್ಯೆಯಾಗಿದೆ. ಸಸ್ಯ ಪೋಷಕಾಂಶಗಳನ್ನು ಸಿಂಪಡಣೆ ಮಾಡಲು ಅಧಿಕ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕೃಷಿ ಡ್ರೋನ್ ಬಳಸಿ ಸಿಂಪಡಣೆ ಮಾಡುವುದು ಒಳ್ಳೆಯ ಮಾರ್ಗವಾಗಿದೆ ಎಂದು ತಿಳಿಸಿದರು.

ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ, ವಿಜ್ಞಾನಿಗಳಾದ ಡಾ.ವೆಂಕಟೇಗೌಡ ಜೆ ಮಾತನಾಡಿ, ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದು ಪ್ರಸ್ತುತ ಚಾಲ್ತಿಯಲ್ಲಿರುವ ವಿಧಾನವಾಗಿದೆ. ಈ ವಿಧಾನದಿಂದ ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ವಾತವಾರಣದಲ್ಲಿ ತಾಪಮಾನ ಹೆಚ್ಚಾದಂತೆ ಯೂರಿಯಾದಲ್ಲಿನ ಪೋಷಕಾಂಶವು ಆವಿಯಾಗಬಹುದು. ಹೆಚ್ಚಿನ ಮಳೆಂದ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ.

ಈ ಸಮಸ್ಯೆಗಳಿಗೆ ಪರಿಹಾರವಾಗಿ ನ್ಯಾನೋ ಯೂರಿಯ ಸಿಂಪಡಣೆಯು ಯೋಗ್ಯ ಮಾರ್ಗವಾಗಿದೆ. ನ್ಯಾನೋ ಯೂರಿಯಾದ ಸೂಕ್ಷ್ಮ ಕಣಗಳು ಹೆಚ್ಚಿನ ಸುತ್ತಳತೆ ಹೊಂದಿದ್ದು, ಎಲೆಗಳ ಮೇಲೆ ಸಿಂಪರಣೆ ಮಾಡಿದಾಗ ಶೀರ್ಘವಾಗಿ ಎಲೆಗಳಲ್ಲಿನ ಸೂಕ್ಷ್ಮ ರಂಧ್ರಗಳಾದ ಸ್ಟೋಮ್ಯಾಟ ಮೂಲಕ ಸಸ್ಯದ ಶರೀರದೊಳಗೆ ಸೇರಿ ಪೋಷಕಾಂಶಗಳು ನ್ಯಾಯೋಚಿತವಾಗಿ ಸಸ್ಯದ ಬೆಳವಣಿಗೆಗೆ ದೊರೆಯುವಂತೆ ಮಾಡುತ್ತವೆ. ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.

ಇಫ್ಕೋ ಸಂಸ್ಥೆಯ ಚೇತನ್ ಮಾತನಾಡಿ, ನ್ಯಾನೋ ಯೂರಿಯಾ ಬಳಕೆಗೆ ರೈತರ ಖರ್ಚು ಕಡಿಮೆಯಾಗುವುದಲ್ಲದೇ ರೈತರು ಹೆಚ್ಚಿನ ಆದಾಯ ಪಡೆಯಬಹುದು. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಯನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡುವುದರ ಮೂಲಕ ರೈತರು ಕೃಷಿ ಕಾರ್ಮಿಕರ ಕೊರತೆ ನೀಗಿಸಬಹುದೆಂದು ತಿಳಿಸಿದರು.

ಕೊನೆಯಲ್ಲಿ ಸೊಣ್ಣಪ್ಪನಹಳ್ಳಿ ಗ್ರಾಮದ ರೈತ ಸದಾಶಿವಮೂರ್ತಿ ಅವರ ಜಮೀನಿನಲ್ಲಿ ಬೆಳೆಯಲಾಗುತ್ತಿರುವ ರಾಗಿ ಬೆಳೆಗೆ ಡ್ರೋನ್ ಬಳಸಿ ನ್ಯಾನೋ ಯೂರಿಯಾ ವನ್ನು ಸಿಂಪಡಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕೊನ್ನಘಟ್ಟ ಗ್ರಾಮ ಪಂಚಾತಿಯ ಅಧ್ಯಕ್ಷೆ ಮಂಗಳ, ಸದಸ್ಯ ಪ್ರಭಾಕರ್, ಇಪ್ಕೋ ಸಂಸ್ಥೆಯ ಪ್ರತಿನಿಧಿಗಳು, ಪ್ರಗತಿ ಪರ ರೈತರು, ಗ್ರಾಮದ ರೈತರು,ರೈತ ಮಹಿಳೆಯರು, ಕೃಷಿ ಅಧಿಕಾರಿಗಳು ಹಾಗೂ ಆತ್ಮ ಸಿಬ್ಬಂದಿ ಭಾಗವಸಿದ್ದರು.

Leave a Reply

Your email address will not be published. Required fields are marked *

error: Content is protected !!