
ಕೋಲಾರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುವ ಮೂಲಕ ಖಾಸಗೀಕರಣ ಮಾಡಲು ಹೊರಟಿದ್ದು ಇದರ ವಿರುದ್ದವಾಗಿ ಎಸ್ಎಫ್ಐ ಸಂಘಟನೆಯು ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ಇದ್ದು ನಿರಂತರ ಹೋರಾಟಕ್ಕೆ ಸಿದ್ದವಿದೆ ಎಂದು ಸಂಘಟನೆಯ ನೂತನ ರಾಜ್ಯ ಅಧ್ಯಕ್ಷ ಅಂಬ್ಲಿಕಲ್ ಎನ್ ಶಿವಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತಿಚೆಗೆ ಶೈಕ್ಷಣಿಕ ಕ್ಷೇತ್ರವು ಶ್ರೀಮಂತರ ಪಾಲಾಗುತ್ತಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ವಿದ್ಯಾರ್ಥಿಗಳು ಚಳವಳಿಯ ಮೂಲಕ ಸಮಾನ ಶಿಕ್ಷಣಕ್ಕಾಗಿ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಸಮಾನ ಗುಣಮಟ್ಟದ ಶಿಕ್ಷಣಕ್ಕೆ ಸರಕಾರಗಳು ಬಜೆಟ್ನಲ್ಲಿ ಅಗತ್ಯ ಹಣ ಮೀಸಲಿರಿಸಬೇಕು.ಎಲ್ಲ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಮತ್ತು ಮೂಲ ಸೌಲಭ್ಯಕ್ಕೆ ಉತ್ತೇಜನ ನೀಡಬೇಕು. ಸಂವಿಧಾನದ ಆಶಯದಂತೆ ವಿವಿಧತೆಯಲ್ಲಿ ಏಕತೆಯ ಸೌಹಾರ್ದ ಭಾರತ ನಿರ್ಮಾಣದ ಗುರಿ ಹೊಂದಲಾಗಿದೆ ಯಾವುದೇ ರೀತಿಯ ತಾರತಮ್ಯವಿಲ್ಲದ ಶೈಕ್ಷಣಿಕ ವಾತಾವರಣದ ನಿರ್ಮಾಣವಾಗಬೇಕು ಖಾಸಗಿ ರಂಗದಲ್ಲಿ ಮೀಸಲಾತಿಗೆ ಒತ್ತಾಯ. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಐಕ್ಯತೆ ಉಳಿವಿಗಾಗಿ ಯೋಜನೆ ರೂಪಿಸುವುದು ಸಮ್ಮೇಳನದ ಮುಖ್ಯ ಧ್ಯೇಯಗಳಾಗಿವೆ ಎಂದು ತಿಳಿಸಿದರು.
ಸಂಘಟನೆಯ 16 ನೇ ರಾಜ್ಯ ಸಮ್ಮೇಳನವನ್ನು ಇತ್ತಿಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದಿದ್ದು ರಾಜ್ಯದಲ್ಲಿನ ಶೈಕ್ಷಣಿಕ ಮತ್ತು ಜನರ ಸಮಸ್ಯೆಗಳ ಈಡೇರಿಕೆಗಾಗಿ 16 ನಿರ್ಣಯಗಳು ಮತ್ತು ಕೋಲಾರ ಜಿಲ್ಲೆಯ ನೀರಾವರಿ, ಸರ್ಕಾರಿ ಮೆಡಿಕಲ್ ಕಾಲೇಜು, ಸೇರಿದಂತೆ ಜ್ವಲಂತ ಸಮಸ್ಯೆಗಳ ವಿರುದ್ದ ಧ್ವನಿ ಎತ್ತಲು ತೀರ್ಮಾನಿಸಲಾಗಿದೆ, 20 ಜಿಲ್ಲೆಗಳಿಂದ ಭಾಗವಹಿಸಿದ್ದ ಪ್ರತಿನಿಧಿಗಳು 51 ಜನರ ನೂತನ ರಾಜ್ಯ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು ನೂತನ ರಾಜ್ಯ ಅಧ್ಯಕ್ಷರಾಗಿ ಕೋಲಾರದ ಅಂಬ್ಲಿಕಲ್ ಶಿವಪ್ಪ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಮೈಸೂರು ವಿಜಯಕುಮಾರ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ಜಿಲ್ಲಾ ಉಪಾಧ್ಯಕ್ಷರಾದ ಶಶಿಕುಮಾರ್, ಲಾವಣ್ಯ, ಜಿಲ್ಲಾ ಸಹಕಾರ್ಯದರ್ಶಿ, ಹರ್ಷಿತ ಮುಖಂಡರಾದ ಅರ್ಚಿತಾ ಇದ್ದರು.