ದೊಡ್ಡಬಳ್ಳಾಪುರ: ಹರಿಜನ್, ನವಜೀವನ್, ಯಂಗ್ ಇಂಡಿಯಾ ಮುಂತಾದ ಪತ್ರಿಕೆಗಳನ್ನು ಆರಂಭಿಸಿದ ಗಾಂಧೀಜಿ ತನ್ನ ಬರವಣಿಗೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಅಸ್ತ್ರವಾಗಿ ಬಳಸಿಕೊಂಡಿದ್ದರು ಎಂದು ಶ್ರೀ ದೇವರಾಜ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಜೆ. ರಾಜೇಂದ್ರ ಹೇಳಿದರು.
ಶ್ರೀ ದೇವರಾಜ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಅವರ 155ನೇ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ಪತ್ರಿಕಾ ಮಾಧ್ಯಮದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು, ಅವರು ಹೊಂದಿದ್ದ ಅಭಿಪ್ರಾಯ ಹಾಗೂ ವಿಚಾರಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ, ಅವರು ಅಂದು ಆಡಿದ ಮಾತುಗಳು ಇಂದಿಗೂ ಕೂಡ ಸತ್ಯವಾಗಿವೆ, ಸತ್ಯವೇ ದೇವರು ಸತ್ಯಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರು ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸಮಸ್ತ ಭಾರತೀಯರನ್ನು ಒಗ್ಗೂಡಿಸಿ ಜಾಗತಿಕ ಮನ್ನಣೆ ಗಳಿಸಿದರು, ಅಹಿಂಸೆಯನ್ನು ತಮ್ಮ ದಿನನಿತ್ಯದ ಜೀವನದಲ್ಲೂ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬಹುದು ಎಂಬುದನ್ನು ತಮ್ಮದೇ ಉದಾಹರಣೆಯ ಮೂಲಕ ಪ್ರದರ್ಶಿಸಿದ್ದು ಅವರ ದೊಡ್ಡ ಸಾಧನೆಯಾಗಿದೆ. ಅವರ ಇಡೀ ಜೀವನ ಸತ್ಯದ ಪ್ರಯೋಗವಾಗಿತ್ತು, ಅವರಂತೆಯೇ ಲಾಲ್ ಬಹದ್ದೂರ್ ಶಾಸ್ತ್ರಿಗಳು ಸಹ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಡಿಸಿಕೊಂಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಚಿಕ್ಕಣ್ಣ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಇಂದು ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಗಾಂಧೀಜಿ ತಮ್ಮನ್ನು ಯಾರು ದ್ವೇಷಿಸಿದರೋ ಅವರನ್ನೇ ಪ್ರೀತಿಸುತ್ತಿದ್ದರು, ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕಿದೆ. ತತ್ವ, ಅಹಿಂಸೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕಿದೆ ಅವರ ಬದುಕು ಬೋಧನೆ, ತತ್ವ, ಆದರ್ಶಗಳು ನಮ್ಮೆಲ್ಲರ ಹೃದಯಗಳಲ್ಲಿ ಎಂದಿಗೂ ಅಜರಾಮರ ಅವರು ಹೇಳಿದ ಅನೇಕ ಮಾತುಗಳು ಇವತ್ತಿಗೂ ಸತ್ಯ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ದಾದಾಪೀರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾದ ಬಾಬುರೆಡ್ಡಿ, ಅಭಿಯಂತರರಾದ ರಮೇಶ್ , ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರಾದ ಮಹಾಂತೇಶಪ್ಪ, ನರಸಿಂಹರೆಡ್ಡಿ, ಧನಂಜಯ್ ರವಿಕುಮಾರ್, ಉಪ ಪ್ರಾಂಶುಪಾಲರಾದ ದಕ್ಷಿಣ ಮೂರ್ತಿ, ಜಿಯಾಉಲ್ಲಾಖಾನ್, ಮ್ಯಾನೇಜರ್ ಯತಿನ್, ಉದ್ಯೋಗ ಅಧಿಕಾರಿಯಾದ ಬಾಬುಸಾಬಿ, ಎನ್.ಎಸ್.ಎಸ್ ಅಧಿಕಾರಿ ಲಕ್ಷ್ಮೀಶ, ಲಯನ್ಸ್ ಕ್ಲಬ್ ಖಜಾಂಚಿ ರವಿಕುಮಾರ್, ಪ್ರಾಧ್ಯಾಪಕರಾದ ಶ್ರೀನಿವಾಸ್,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.