ವಿದ್ಯಾರ್ಥಿಗಳು, ಶಿಕ್ಷಕರು ಪ್ರಯಾಣಿಸುತ್ತಿದ್ದ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗಧಗ ಹೊತ್ತಿ ಉರಿದ ಪರಿಣಾಮ ಸುಮಾರು 25 ಮಂದಿ ಬೆಂಕಿಗಾಹುತಿಯಾಗಿದ್ದಾರೆ ಎನ್ನಲಾಗಿದೆ.
ಈ ಘಟನೆ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಹೊರವಲಯದಲ್ಲಿ ನಡೆದಿದೆ.
ಮಧ್ಯ ಉತೈ ಥಾನಿ ಪ್ರಾಂತ್ಯದಿಂದ ಬ್ಯಾಂಕಾಕ್‌ಗೆ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಈ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬಸ್ ನಲ್ಲಿ ಶಿಕ್ಷಕರು, ಮಕ್ಕಳು ಸೇರಿದಂತೆ 44 ಜನರಿದ್ದರು. ಮಧ್ಯಾಹ್ನ 12.30 ರ ಸುಮಾರಿಗೆ ಬ್ಯಾಂಕಾಕ್‌ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಬಸ್ ಹೊತ್ತಿ ಉರಿದಿದೆ.
ಒಂದು ಟೈರ್ ಸ್ಫೋಟಗೊಂಡ ನಂತರ ಬಸ್ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಘಟನಾಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.