ತನ್ನ ಚಲನ ಚಿತ್ರಗಳಲ್ಲಿ ವಿವಿಧ ಹಾಡುಗಳಿಗೆ ವಿಭಿನ್ನವಾದ ಸ್ಟೆಪ್ಸ್ ಹಾಕುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ತೆಲುಗಿನ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಭಾರತೀಯ ಚಲನಚಿತ್ರೋದ್ಯಮದ ಅತ್ಯಂತ ಕ್ರಿಯಾತ್ಮಾಕ ತಾರೆ ಎಂದು ಗಿನ್ನಿಸ್ ವಿಶ್ವ ದಾಖಲೆ ಗೌರವ ದೊರಕಿದೆ.
ಹೈದರಾಬಾದ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗಿನ್ನಿಸ್ ವಿಶ್ವ ದಾಖಲೆಯ ಪ್ರತಿನಿಧಿಗಳು ಚಿರಂಜೀವಿಗೆ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
ಚಿರಂಜೀವಿ ಅವರು 1978ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅವರ 46 ವರ್ಷಗಳ ಸಿನಿ ಪಯಣದಲ್ಲಿ 156 ಚಿತ್ರಗಳಲ್ಲಿ ಅಭಿನಯಿಸಿದ್ದು, 537 ಹಾಡುಗಳಲ್ಲಿ 24,000 ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚಿರಂಜೀವಿ, ಈ ಕ್ಷಣ ಅವಿಸ್ಮರಣೀಯವಾಗಿದೆ. ನಾನು ಮಾಡಿದ ನೃತ್ಯಗಳಿಂದಾಗಿ ಗಿನ್ನಿಸ್ ವಿಶ್ವ ದಾಖಲೆಗೆ ಸೇರುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ಇದು ನಿಜವಾಗಿಯೂ ನನ್ನನ್ನು ನಟನಾಗಿ ಮಾಡಿದೆ. ನೃತ್ಯವು ನನ್ನ ವೃತ್ತಿ ಜೀವನದುದ್ದಕ್ಕೂ ಉತ್ತಮ ಪ್ರಶಂಸೆ ತಂದುಕೊಟ್ಟಿದೆ. ನನ್ನನ್ನು ನಟನಾಗಿ ಮಾಡುವಲ್ಲಿ ನಿರ್ದೇಶಕರು, ನಿರ್ಮಾಪಕರು, ನೃತ್ಯ ಸಂಯೋಜಕರ ಕೊಡುಗೆ ಅಪಾರವಾಗಿದೆ. ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದರು.
ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾದ ಚಿರಂಜೀವಿ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಹಾಗೂ ಚಿರಂಜೀವಿ ಸಹೋದರ ಪವನ್ ಕಲ್ಯಾಣ್, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಸೇರಿದಂತೆ ಮತ್ತಿತರ ಸಿನಿ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.