ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ತರಬೇತಿ ಅಧಿಕಾರಿಗಳ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಹಾದಿ ತಪ್ಪುತ್ತಿದ್ದು, ತರಬೇತಿಗೆಂದು ಜನರನ್ನು ತರಬೇತಿ ಕೇಂದ್ರಕ್ಕೆ ಕರೆಸಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ದಿನಪೂರ್ತಿ ಅಲ್ಲೇ ಇರಿಸಿಕೊಂಡು ಯಾವ ತರಬೇತಿ ನೀಡದೇ ಮನೆಗೆ ವಾಪಸ್ ಕಳುಹಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಲಕ್ಷಾಂತರ ರೂ. ದುರುಪಯೋಗವಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಲಾಗಿನ್ ಲಾಗ್ ಔಟ್ ಗೆ ಸೀಮಿತವಾದ ಬುಟ್ಟಿ ನೇಯ್ಗೆ ತರಬೇತಿ…!
ನಗರದಲ್ಲಿ ಕಳೆದ ಮೂರು ದಿನಗಳಿಂದ ಬುಟ್ಟಿ ನೇಯ್ಗೆ ತರಬೇತಿ ನಡೆಯುತ್ತಿದ್ದು, ಯಾವುದೇ ರೀತಿಯ ತರಬೇತಿ ನೀಡದೇ ಬೆಳಗ್ಗೆ ಸಂಜೆ ಲಾಗಿನ್ ಲಾಗ್ ಔಟ್ ಮಾಡಿಸಿಕೊಂಡು ಮನೆಗೆ ಕಳುಹಿಸಲಾಗುತ್ತಿದೆ ಎಂದು ಹೆಸರನ್ನು ಹೇಳುವುದುಕ್ಕೆ ಇಚ್ಛಿಸದ ತರಬೇತಿ ಪಡೆಯುವವರು ತಿಳಿಸಿದ್ದಾರೆ.
ತರಬೇತಿ ಸ್ಥಳದಲ್ಲಿನ ಸಿಬ್ಬಂದಿಗೆ ತರಬೇತಿ ಕುರಿತು ಪ್ರಶ್ನೆ , ತಾಂತ್ರಿಕ ದೋಷ ಇದೆ. ಆದ್ದರಿಂದ ಹೀಗೆ ಆಗುತ್ತಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಕುಶಲಕರ್ಮಿಗಳಿಗೆ ಬೂಸ್ಟರ್ ಡೋಸ್ ಆಗಬೇಕಿದ್ದ ಈ ಯೋಜನೆ ಆರಂಭಗೊಂಡು ಬರೋಬ್ಬರಿ ಒಂದು ವರ್ಷ ಕಳೆದರೂ ಯೋಜನೆ ಸರಿಯಾಗಿ ಟೇಕಾಫ್ ಆಗದೇ ಹಳ್ಳ ಹಿಡಿದಿದೆ. ಯೋಜನೆಯಡಿ ಗುರುತಿಸಿರುವ 18 ಕೌಶಲ ತರಬೇತಿ ಪೈಕಿ ಕೇವಲ 2ಕ್ಕೆ ಮಾತ್ರ ತರಬೇತಿ ಸಿಗುತ್ತಿದೆ. ಬಹುತೇಕ ಕೌಶಲ ತರಬೇತಿಗಳಿಗೆ ತರಬೇತುದಾರರೇ ಇಲ್ಲದಿರುವುದು ಹಿನ್ನಡೆಗೆ ಕಾರಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ತರಬೇತಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀ ಪರಿಶೀಲನೆ ನಡೆಸಬೇಕಿದೆ.
ಅಲ್ಲದೆ ತರಬೇತಿ ಕೇಂದ್ರಗಳ ಸಿಸಿ ಕ್ಯಾಮೆರಾಗಳ ದೃಶ್ಯವನ್ನು ವಶಕ್ಕೆ ಪಡೆದು, ನೀಡಲಾದ ತರಬೇತಿ ಏನು.? ಭಾಗಿಯಾದ ಫಲಾನುಭವಿಗಳು ಎಷ್ಟು..? ತರಬೇತುದಾರರು ಯಾರು..? ಎಂಬ ಕುರಿತು ತನಿಖೆ ನಡೆಸಿ, ತರಬೇತಿ ಹೆಸರಲ್ಲಿ ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಮೃತ್ಯುಂಜಯ ಹೇಳಿದ್ದಾರೆ.