ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಆಂದೋಲನ: ಜಿಲ್ಲೆಯ 23 ಆಹಾರ ಉದ್ದಿಮೆಗಳಿಗೆ ನೋಟಿಸ್ ಜಾರಿ ಹಾಗೂ 20,000 ದಂಡ ಸಂಗ್ರಹ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಆಂದೋಲನದ ಭಾಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಎಲ್ಲಾ ಆಹಾರ ಸುರಕ್ಷತಾಧಿಕಾರಿಗಳು ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಒಟ್ಟು 63 ವಿವಿಧ ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿ ವ್ಯಾಪಾರಸ್ಥರು ಮತ್ತು ಇತರೆ ಆಹಾರ ವ್ಯಾಪಾರಿಗಳನ್ನು ಭೇಟಿ ನೀಡಿ ಆಹಾರ ಉದ್ದಿಮೆಗಳನ್ನು ಪರಿಶೀಲಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡದ ವ್ಯಾಪಾರಿಗಳಿಗೆ ಒಟ್ಟು 23 ನೋಟಿಸ್ ಜಾರಿ ಮಾಡಿ, ಒಟ್ಟು ರೂ. 20,000 (ಇಪ್ಪತ್ತು ಸಾವಿರ)ಗಳ ದಂಡ ವಿಧಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರ ಸೂಚನೆಯಂತೆ ಆಗಸ್ಟ್ 30 ಮತ್ತು 31 ರಂದು ಎರಡು ದಿನಗಳ ಕಾಲ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಸಂಬಂಧ ಜಿಲ್ಲೆಯಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ಆಹಾರ ಸಿದ್ಧಪಡಿಸುವ ಸ್ಥಳ, ವ್ಯಾಪಾರದ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ತಮ್ಮ ಆರೋಗ್ಯವು ಸಹ ಉತ್ತಮವಾಗಿರಬೇಕು ಎಂದು ಆಹಾರ ವ್ಯಾಪಾರಿಗಳಿಗೆ ಆಹಾರ ಸುರಕ್ಷತಾಧಿಕಾರಿಗಳು ಜಾಗೃತಿ ನೀಡಿ, ಆಹಾರ ಪದಾರ್ಥಗಳ ತಯಾರಕರು, ಮಾರಾಟಗಾರರು, ದಾಸ್ತಾನುದಾರರು ಶುಚಿತ್ವಕ್ಕೆ ಒತ್ತು ನೀಡಬೇಕು. ಗ್ರಾಹಕರಿಗೆ ಶುದ್ಧವಾದ ಆಹಾರವನ್ನು ಮತ್ತು ನೀರನ್ನು ಪೂರೈಸಬೇಕು, ಆಹಾರ ಉದ್ದಿಮೆಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳತಕ್ಕದ್ದು ಎಂದು ಅಧಿಕಾರಿಗಳು ಜಾಗೃತಿ ಮೂಡಿಸಿದರು.

ಆಹಾರಕ್ಕೆ ಕೃತಕ ಬಣ್ಣಗಳನ್ನು ಬಳಸಬಾರದು. ಮೊಟ್ಟೆ, ಮೀನು, ಮಾಂಸದ ಪದಾರ್ಥಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ ಬಳಕೆ ಮಾಡುವಂತಾಗಬೇಕು ಎಂದು ಅಧಿಕಾರಿಗಳು ಆಹಾರ ಉದ್ದಿಮೆದಾರರಿಗೆ ತಿಳಿಸಿದರು.

ಈ ಆಂದೋಲನದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ, ಹೋಸಕೋಟೆ ತಾಲ್ಲೂಕು ಆಹಾರ ಸುರಕ್ಷತೆ ಅಧಿಕಾರಿ ಗೋವಿಂದರಾಜು, ದೇವನಹಳ್ಳಿ ತಾಲ್ಲೂಕು ಆಹಾರ ಸುರಕ್ಷತ ಅಧಿಕಾರಿ ಪ್ರವೀಣ್, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕು ಆಹಾರ ಸುರಕ್ಷತ ಅಧಿಕಾರಿ ನಾಗೇಶ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!