ಸರ್ವಧರ್ಮ ಸಮನ್ವಯ ಸಾರುವ ನಿಟ್ಟಿನಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಿಸಬೇಕು, ಖಾಸಗಿ, ಸರ್ಕಾರಿ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಂಬಂಧಿಸಿದ ಇಲಾಖೆಗಳಿಂದ ಪೂರ್ವಾನುಮತಿಯನ್ನು ಪಡೆಯಬೇಕು. ಹಬ್ಬ ಆಚರಣೆಗಳು ಶಾಂತಿ, ಸಹಬಾಳ್ವೆ, ಸೌಹಾರ್ದತೆಯಿಂದ ಒಳಗೊಂಡಿರಬೇಕು. ಯಾರೂ ಸಹ ಕಾನೂನಿನ ಎಲ್ಲೆ ಮೀರಬಾರದು. ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವಂತೆ ನಡೆದುಕೊಳ್ಳುವವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಕುಮಾರ್ ಎಚ್ಚರಿಸಿದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಬ್ಬವನ್ನು ಶಾಂತಿ, ಸಂತೋಷವಾಗಿ ಆಚರಣೆ ಮಾಡಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಎಲ್ಲಾ ಧರ್ಮಗಳು ಶಾಂತಿ-ಸುವ್ಯವಸ್ಥೆ, ಅಹಿಂಸೆ, ಸಹಬಾಳ್ವೆ, ಸೌಹಾರ್ದ ಸೇರಿದಂತೆ ಒಳ್ಳೆ ಗುಣಗಳನ್ನು ಹೇಳುತ್ತವೆ. ಅಂತಹ ಒಳ್ಳೆ ಗುಣಗಳನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ನಮ್ಮ ಅಭಿವೃದ್ಧಿ ಜೊತೆಗೆ ಸಮಾಜನೂ ಅಭಿವೃದ್ಧಿ ಆಗುತ್ತದೆ ಎಂದರು.
ಯಾವುದೇ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡಬಾರದು. ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ಭಾವೈಕ್ಯ, ಸಹಭಾಳ್ವೆ ಸಾಧ್ಯ. ಹಾಗಾಗಿ ಶಾಂತಿ ಭಂಗ ತರುವ ಯಾವುದೇ ಹೇಳಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವುದು. ಅದನ್ನು ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪರಾಧವಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರಲ್ಲದೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಈಗಾಗಲೇ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ ಎಂದು ತಿಳಿಸಿದರು.
ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಇಲಾಖೆಯಿಂದ ಸಂಪೂರ್ಣ ಬೆಂಬಲವಿದೆ ಎಂದರು.
ನಂತರ ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ಅವರು ಮಾತನಾಡಿ, ಗಣೇಶ ಕೂರಿಸಲು ಅನುಮತಿ ಕಡ್ಡಾಯವಾಗಿರುತ್ತದೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಜಾಗದಲ್ಲಿ ಗಣೇಶ ಕೂರಿಸುವಂತಿಲ್ಲ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಗಣೇಶ ಕೂರಿಸಿರುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು. ವಿದ್ಯುತ್ ಲೈನ್ ಗೆ ಎಟಕುವಂತೆ ಪೆಂಡಲ್, ಚಪ್ಪರ ಹಾಕಬಾರದು, ಜೊತೆಗೆ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಲೈನ್ ಇರುವುದನ್ನು ಪರಿಶೀಲಕೊಳ್ಳುತ್ತಿರಬೇಕು. ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.