ಪ್ರತಿಯೊಬ್ಬ ವಿದ್ಯಾರ್ಥಿ ಕಾನೂನಿನ ಬಗ್ಗೆ ಹೆಚ್ಚು ಗಮನ ಹರಿಸಿ, ಕಡ್ಡಾಯವಾಗಿ ಕಾನೂನು ಪಾಲನೆಗೆ ಮುಂದಾಗಬೇಕು ಎಂದು ದೊಡ್ಡಬೆಳವಂಗಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಅವರು ತಿಳಿಸಿದರು.
ಯಲಹಂಕ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಬಿಟೆಕ್ ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಾರ್ಷಿಕ ಎನ್ಎಸ್ಎಸ್ ವಿಶೇಷ ಶಿಬಿರದಲ್ಲಿ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಸಂಚಾರಿ ನಿಯಮಗಳ ತರಬೇತಿ ನೀಡಿದರು.
ಕಾನೂನು ಮತ್ತು ಸುವ್ಯವಸ್ಥೆ, ಲೈಂಗಿಕ ದೌರ್ಜನ್ಯ ತಡೆಯುವುದು, ಬಾಲ್ಯ ವಿವಾಹ ನಿರ್ಮೂಲನೆ, ಕಿರುಕುಳ, ಬಾಲಕಾರ್ಮಿಕತೆಯ ನಿರ್ಮೂಲನೆ, ಅತ್ಯಾಚಾರ, ಕಿಡ್ನ್ಯಾಪ್, ಸರಗಳತನ, ಜೇಬುಗಳ್ಳತನದ ಬಗ್ಗೆ ಎಚ್ಚರಿಕೆ, ಸೈಬರ್ ಅಪರಾಧಗಳ ಬಗ್ಗೆ ಮುನ್ನೆಚ್ಚರಿಕೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ ಅವರು, ಜೀವ ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತಂದಿರುವ ಸಂಚಾರಿ ನಿಯಮಗಳನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಬೇಕು. ವಾಹನ ಚಾಲನೆ ಮಾಡುವಾಗ ತಪ್ಪದೆ ಹೆಲ್ಮೆಟ್ ಧರಿಸಬೇಕು. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಬಾರದು. ದ್ವಿಚಕ್ರ ವಾಹನದಲ್ಲಿ ತ್ರೀಬಲ್ ರೈಡಿಂಗ್, ಮದ್ಯಪಾನ ಮಾಡಿ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಸೈಡ್ ಮಿರರ್ ಇಲ್ಲದ ವಾಹನ, ತುರ್ತು ವಾಹನಗಳಿಗೆ ದಾರಿ ಬಿಡದಿರುವುದು, ಅಜಾಗರೂಕತೆ ವಾಹನ ಚಾಲನೆ, ಮುಖ್ಯವಾಗಿ ಅಪ್ರಾಪ್ತರ ವಾಹನ ಚಾಲನೆ ಕಡ್ಡಾಯ ನಿಷೇಧ ಎಂದು ತಿಳಿಸಿದರು.
ಈ ವೇಳೆ ಉಪನ್ಯಾಸಕರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.