20 ಲಕ್ಷ ನಗದು, ಬೆಳ್ಳಿ ಆಭರಣಗಳು ಸೇರಿ ಸುಮಾರು 42 ಲಕ್ಷ ರೂ.ಮೌಲ್ಯದ ವಸ್ತುಗಳ ಜಪ್ತಿ; 347 ಲೀಟರ್ ಮದ್ಯ, 13 ಸಾವಿರ ಗ್ರಾಂ ಡ್ರಗ್ಸ್ ಹಾಗೂ 536 ಕುಕ್ಕರ್ ವಶ-ಜಿಲ್ಲಾಧಿಕಾರಿ ಆರ್.ಲತಾ

ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 20 ಲಕ್ಷ ರೂ.ನಗದು, ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ 48 ಕೆ.ಜಿ.ಬೆಳ್ಳಿ , ವಿವಿಧ ಉಡುಪು, ಬಟ್ಟೆಗಳು ಸೇರಿ ಸುಮಾರು 42,83,320 ರೂ.ಮೌಲ್ಯದ ವಸ್ತುಗಳನ್ನು ನಿನ್ನೆ ಶುಕ್ರವಾರ ನೆಲಮಂಗಲದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,66,980 ರೂ.ಮೌಲ್ಯದ 347 ಲೀಟರ್ ಅಕ್ರಮ ಮದ್ಯ, 3 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 13 ಸಾವಿರ ಗ್ರಾಂ ಡ್ರಗ್ಸ್ ಹಾಗೂ 3 ಲಕ್ಷಕ್ಕೂ ಅಧಿಕ ಮೌಲ್ಯದ 536 ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ, ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಮಾರ್ಚ್ 24 ರಂದು ಪೊಲೀಸರು ಕಾರ್ಯಾಚರಣೆ ನಡೆಸಿ, ಎರಡು ಕಾರುಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಣೆ ಮಾಡುತ್ತಿದ್ದ 20 ಲಕ್ಷ ರೂ.ನಗದು,20,22,300 ರೂ.ಮೌಲ್ಯದ 48.156 ಕೆಜಿ ಬೆಳ್ಳಿ,1,23,000 ರೂ.ಮೌಲ್ಯದ 410 ಸೀರೆಗಳು,87,800 ರೂ.ಮೌಲ್ಯದ 439 ಚೂಡಿದಾರ್‌ಗಳು, ಸುಮಾರು 39 ಸಾವಿರ ರೂ.ಮೌಲ್ಯದ ಪ್ಯಾಂಟ್ ಬಟ್ಟೆ,9,800 ರೂ.ಮೌಲ್ಯದ 49 ಶರ್ಟ್ ಪೀಸ್‌ಗಳು ಸೇರಿ ಒಟ್ಟು 42,83,320 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ ನೆಲಮಂಗಲ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *