ನಗರಕ್ಕೆ ಪ್ರತಿ ದಿನ 16.8 ಎಂ.ಎಲ್‌.ಡಿ ನೀರಿನ ಅಗತ್ಯ: ಜಕ್ಕಲಮೊಡಗು ಜಲಾಶಯದಿಂದ ಪ್ರತಿದಿನ 2 ಎಂ.ಎಲ್‌.ಡಿ ನೀರು ಸರಬರಾಜು

ದೊಡ್ಡಬಳ್ಳಾಪುರ: ಒಂದು ವಾರದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯದಲ್ಲಿನ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಕೋಡಿ ಬೀಳಲು ಕೇವಲ 3 ಅಡಿಗಳು ಮಾತ್ರ ಬಾಕಿ ಇದೆ.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಜಲಾಶಯವಾಗಿರುವ ಜಕ್ಕಲಮೊಡಗುವಿನಲ್ಲಿ ಗರಿಷ್ಠ 58 ಅಡಿಗಳಷ್ಟು ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ. ಈಗ 55 ಅಡಿಗಳಷ್ಟು ನೀರುವ ಸಂಗ್ರಹವಾಗುವ ಮೂಲಕ ಎರಡೂ ನಗರಗಳ ಕುಡಿಯುವ ನೀರಿನ ಕೊರತೆ ನೀಗಿಸಿದೆ. ಸದ್ಯಕ್ಕೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಎರಡೂ ನಗರಗಳಿಗೆ ಒಂದುವರೆ ವರ್ಷಗಳ ಕಾಲ ಬರಲಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.

1.25 ಲಕ್ಷ ಜನ ಸಂಖ್ಯೆಯನ್ನು ಹೊಂದಿರುವ ದೊಡ್ಡಬಳ್ಳಾಪುರ ನಗರದಲ್ಲಿ,14,500 ಕೊಳಾಯಿ ಸಂಪರ್ಕಗಳು ಇವೆ. ಪ್ರತಿ ದಿನ ನಗರಕ್ಕೆ 16.8 ಎಂ.ಎಲ್‌.ಡಿ (ದಶಲಕ್ಷ ಲೀಟರ್‌) ನೀರು ಅಗತ್ಯವಿದ್ದು, ಜಕ್ಕಲಮೊಡಗು ಜಲಾಶಯದಿಂದ ಪ್ರತಿದಿನ 2 ಎಂ.ಎಲ್‌.ಡಿ ನೀರು ಸರಬರಾಜಾಗುತ್ತಿದೆ. ಉಳಿದ ನೀರನ್ನು ನಗರಸಭೆ ಅವಲಂಭಿಸಿರುವುದು ಕೊಳವೆ ಬಾವಿಗಳನ್ನು. ನಗರದ ಅಂಚಿನ ಅರಳುಮಲ್ಲಿಗೆ, ಪಾಲನಜೋಗಹಳ್ಳಿ ಕೆರೆ ಅಂಗಳ, ಸೇರಿದಂತೆ ನಗರದ ಅಂಚಿನ ಸರ್ಕಾರಿ ಜಾಗ ಹಾಗೂ ರಸ್ತೆ ಬದಿಗಳಲ್ಲಿ ಕೊರೆಸಲಾಗಿರುವ 95 ಕೊಳವೆ ಬಾವಿಗಳಿಂದ 5 ದಿನಗಳಿಗೆ ಒಮ್ಮೆ ನಗರದ ಕೊಳಾಯಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ನಗರಸಭೆ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ.ರಾಮೇಗೌಡ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!