ಸೃಜನಶೀಲತೆ ಎಂಬುದು ಛಾಯಾಗ್ರಾಹಕರಿಗೆ ಅತ್ಯಗತ್ಯ- ಬಿ.ಆರ್.ವಿಶ್ವನಾಥ್

ಜ್ಞಾನವೆಂಬುದು ಹರಿಯುವ ನದಿಯಂತೆ, ಛಾಯಾಗ್ರಹಣ ಎಂಬುದು ಕಲೆ ಮತ್ತು ತಂತ್ರಜ್ಞಾನವನ್ನು ಮೇಳೈಸಿಕೊಂಡಿದ್ದು, ಸೃಜನಶೀಲತೆ ಎಂಬುದು ಛಾಯಾಗ್ರಾಹಕರಿಗೆ ಅತ್ಯಗತ್ಯವೆಂದು ಖ್ಯಾತ ಛಾಯಾಗ್ರಾಹಕ ಹಾಗೂ ಸಿನಿಮಾಟೋಗ್ರಾಫರ್ ಬಿ.ಆರ್.ವಿಶ್ವನಾಥ್ ಅವರು ತಿಳಿಸಿದರು.

ನೆಲಮಂಗಲ ತಾಲ್ಲೂಕಿನ ಅರಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿಂದು ನಡೆದ ವಿಶ್ವ ಛಾಯಾಗ್ರಹಣದ ದಿನಾಚರಣೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಫೋಟೋಗ್ರಫಿ ಕಲೆ ಎಂಬುದು ತನ್ನನ್ನು ತಾನು ಅಭಿವ್ಯಕ್ತಿಸುವ ಮಾಧ್ಯಮವಾಗಿದ್ದು, ಇಲ್ಲಿ ಛಾಯಾಗ್ರಾಹಕನ ಭಾವನೆಗಳು ಪ್ರಕಟಗೊಳ್ಳುತ್ತವೆ ಎಂದರಲ್ಲದೆ, ನಿರಂತರತೆ ಹಾಗೂ ತಾಳ್ಮೆ ಎಂಬುದು ಈ ಕ್ಷೇತ್ರಕ್ಕೆ ಅಗತ್ಯವೆಂದು ಹೇಳಿದರು.

ತಂತ್ರಜ್ಞಾನದ ಬೆಳವಣಿಗೆಯೂ ಒಬ್ಬ ಛಾಯಾಗ್ರಾಹಕನಿಗೆ ಬಹಳಷ್ಟು ಅವಕಾಶಗಳನ್ನು ಕಲ್ಪಿಸಿದ್ದು, ಅದರಷ್ಟೇ ವೃತ್ತಿಪರತೆಗೆ ಸವಾಲುಗಳನ್ನು ಸಹ ಸೃಷ್ಟಿಸಿವೆ ಎಂದು ಹೇಳಿದರಲ್ಲದೆ, ನಿರಂತರ ಕಲಿಕೆಯಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದರು.

ಬದುಕು ಎಂಬುದೊಂದು ಕಾರ್ಯಾಗಾರವಿದ್ದಂತೆ, ಪ್ರತಿನಿತ್ಯ ಕಲಿಸುತ್ತಲೇ ಇರುತ್ತದೆ, ಕಲಿಯುವ ಮನಸ್ಥಿತಿಯನ್ನು ನಾವು ಹೊಂದಿರಬೇಕು ಎಂದರು ಹಾಗೂ ಶಿಬಿರಾರ್ಥಿಗಳೊಟ್ಟಿಗೆ ಸಂವಾದವನ್ನು ನಡೆಸಿದರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,
ಛಾಯಾಗ್ರಾಹಕರು ಪ್ರಸ್ತುತದ ಬದಲಾವಣೆಗಳನ್ನು ಒಪ್ಪಿಕೊಂಡು ಒಗ್ಗಿಕೊಳ್ಳುವ ಗುಣವನ್ನು ರೂಢಿಸಿಕೊಳ್ಳಬೇಕೆಂದರಲ್ಲದೆ, ಹವ್ಯಾಸವಾಗಿ ಮಾತ್ರವಲ್ಲದೆ, ವೃತ್ತಿಯನ್ನಾಗಿ ಛಾಯಾಗ್ರಹಣದ ಕ್ಷೇತ್ರವನ್ನು ಆರಿಸಿಕೊಳ್ಳಬೇಕೆಂಬ ಮಾತನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಉಪನ್ಯಾಸಕರಾದ ದತ್ತಾತ್ರೇಯ, ಸಂಸ್ಥೆಯ ಉಪನ್ಯಾಸಕರಾದ ರವೀಂದ್ರ ಹಾಗೂ ವಿದ್ಯಾ ಹೊಸಮನಿ, ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!