ದೊಡ್ಡಬಳ್ಳಾಪುರ: ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನವ ವಧು-ವರನಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಸದಸ್ಯ ಟಿ.ಎಚ್.ಲವಕುಮಾರ್ ಅವರು ಮಂತ್ರ ಮಾಂಗಲ್ಯ ಬೋಧನೆ ಮಾಡುವ ಮೂಲಕ ನಗರದ ತ.ನ.ಪ್ರಭುದೇವ್ ಅವರ ತೋಟದಲ್ಲಿ ಭಾನುವಾರ ಟಿ.ಎಂ.ಬೃಂದ ಹಾಗೂ ಎಂ.ಪೃಥ್ವಿಕ್ ಘೋರ್ಪಡೆ ವಿವಾಹ ನಡೆಯಿತು.
ಈ ಸಂದರ್ಭದಲ್ಲಿ ವಧು-ವರರನ್ನು ಆರ್ಶೀವದಿಸಿ ಮಾತನಾಡಿದ ಲೇಖಕ ಮಂಜುನಾಥ ಎಂ.ಅದ್ದೆ, ಇತ್ತೀಚಿನ ದಿನಗಳಲ್ಲಿ ವಿವಾಹ ಎನ್ನುವುದು ಎರಡು ಮನಸ್ಸುಗಳ ಒಂದುಗೂಡುವಿಕೆಗಿಂತಲು ತಮ್ಮಲ್ಲಿನ ಸಂಪತ್ತಿನ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡುವ ವಿವಾಹಗಳನ್ನು ನಾವಿಂದು ನೋಡುತ್ತಿದ್ದೇವೆ. ಆದರೆ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹದಲ್ಲಿ ಎರಡು ಯುವ ಮನಸ್ಸುಗಳ ಹಾಗೂ ಎರಡು ಕುಟುಂಬಗಳ ಗಟ್ಟಿಯಾದ ಬಾಂಧವ್ಯವನ್ನು ಕಾಣಬುಹುದಾಗಿದೆ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತ ಸಂಘದ ಚಳುವಳಿಯಲ್ಲಿ ಕುವೆಂಪು ಅವರ ಮಂತ್ರಮಾಂಗಲ್ಯದ ವಿವಾಹಗಳು ನಡೆಯಬೇಕು ಎನ್ನುವುದು ಒಂದಾಗಿದೆ. ಇದರಿಂದ ರೈತರು ಸಾಲಕ್ಕೆ ಸಿಲುಕುವುದು ತಪ್ಪಲಿದೆ. ಇದೇ ಮಾರ್ಗದಲ್ಲಿ ವಿವಾಹವಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಪಿ.ಪೂರ್ಣಚಂದ್ರತೇಜಸ್ವಿ ಅವರು ರೈತ ಸಂಘದ ಹೋರಾಟಗಾರರಿಗೆ ಮಾದರಿಯಾಗಿದ್ದಾರೆ ಎಂದರು.
ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಸರಳ ಭಾಷೆಯಲ್ಲಿ, ಬದುಕಿನ ಮೌಲ್ಯಗಳನ್ನು ತಿಳಿಸುವ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹಗಳು ಸದಾ ಕಾಲಕ್ಕೂ ಆದರ್ಶವಾಗಿದೆ. ರಾಜ್ಯದಲ್ಲಿ ಸಾವಿರಾರು ವಿವಾಹಗಳು ಇದೇ ಆಶಯದಲ್ಲಿ ನಡೆಯುವ ಮೂಲಕ ಸಮೃದ್ದ ಬದುಕನ್ನು ನಡೆಸಿರುವವರು ನಮ್ಮೊಂದಿಗೆ ಇದ್ದಾರೆ ಎಂದರು.
ಬಿಬಿಎಂಪಿ ಯಲಹಂಕ ವಲಯ ಆಯುಕ್ತರಾದ ಸಿ.ಎಸ್.ಕರೀಗೌಡ ಅವರು ಚುಟುಕು ಕವಿ ಎಚ್.ದುಂಡಿರಾಜ್ ಅವರ ಕವನ ‘ರಸ್ತೆಯಲ್ಲಿ ನೋಡಿ ನಕ್ಕಳು ಅವಳು, ಈಗ ನಮ್ಮಿಬ್ಬರಿಗೆ ಇಬ್ಬರು ಮಕ್ಕಳು’ ವಾಚನ ಮಾಡಿ ಇಷ್ಟೇ ಸರಳವಾಗಿರಬೇಕು ವಿವಾಹ ಎನ್ನುವುದೇ ಮಂತ್ರ ಮಾಂಗಲ್ಯದ ಆಶಯವು ಆಗಿದೆ ಎಂದರು.
ಸರಳ ವಿವಾಹದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪುಸ್ತಕವನ್ನು ಉಡುಗರೆಯಾಗಿ ನೀಡಲಾಯಿತು.
ನಟರಾಜ್ ನಾಗಸಂದ್ರ ಅವರು ಅಚ್ಚುಕಟ್ಟಾಗಿ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಈ ವೇಳೆ ರಾಜ್ಯ ರೈತ ಸಂಘದ ಮುಖಂಡರಾದ ಕೆ.ಚುಲೋಚನಮ್ಮ ವೆಂಕಟರೆಡ್ಡಿ,ಕೆ.ಉಮಾ,ಮುತ್ತೇಗೌಡ, ವಿ.ಆರ್.ಗೀತಾವತಿ,ಮುನೇಶ್ವರರಾವ್, ಎಂ.ಪ್ರಜ್ವಲ್ ಹಾಗೂ ರೈತ ಸಂಘದ ಮುಖಂಡರು ಇದ್ದರು.