ಮೋಸ್ಟ್ ವಾಂಟೆಡ್ ಹೊಟ್ಟೆ ಮಂಜುನನ್ನು ತನ್ನ ಪ್ರಾಣದ ಹಂಗನ್ನು ಲೆಕ್ಕಿಸದೆ ಬೆನ್ನಟ್ಟಿ ಹಿಡಿದ ಹೆಡ್ ಕಾನ್ಸ್ಟೇಬಲ್: ಸುಮಾರು 40 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್

ರಾಜ್ಯದ ಹಲವಾರು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ನಟೋರಿಯಸ್ ಅಪರಾಧಿ ಹೊಟ್ಟೆ ಮಂಜನನ್ನು ಬೆಂಗಳೂರಿನ ಸದಾಶಿವನಗರ ಸಿಗ್ನಲ್‌ನಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯನವರು ತನ್ನ ಪ್ರಾಣದ ಹಂಗನ್ನು ಲೆಕ್ಕಿಸದೆ ಬೆನ್ನಟ್ಟಿ ಹಿಡಿದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸುಮಾರು 40 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಮಂಜೇಶ್​​ ಅಲಿಯಾಸ್​ ಹೊಟ್ಟೆ ಮಂಜು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಹೊಟ್ಟೆ ಮಂಜುನನ್ನು ಸಿನಿಮೀಯ ರೀತಿಯಲ್ಲಿ ಬೈಕ್​ ಅಡ್ಡಗಟ್ಟಿದ ಪೊಲೀಸರು ಲಾಕ್​ ಮಾಡಿದ್ದಾರೆ. ಆರೋಪಿ ಮಂಜು ಚಿನ್ನಾಭರಣ ಧರಿಸಿರುವ ವೃದ್ಧೆಯರನ್ನೆ ಟಾರ್ಗೆಟ್ ಮಾಡುತ್ತಿದ್ದ. ಪಿಂಚಣಿ, ವೃದ್ದಾಪ್ಯಾವೇತನ, ಪೋಸ್ಟ್​ಆಫೀಸ್​ಗಳಲ್ಲಿ ಹಣ ಬರೋ ಹಾಗೆ ಮಾಡುತ್ತೇನೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ.

ಈ ಸಂಬಂಧ ಕೊರಟಗೆರೆ, ಮಧುಗಿರಿ, ಹೆಬ್ಬೂರು, ಕೋಳಾಲ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೊಬ್ಬರಿ 40 ಕೇಸ್​ಗಳು ಈತನ ಮೇಲಿವೆ ಎನ್ನಲಾಗಿದೆ.

ಕೊರಟಗೆರೆ ಠಾಣೆ ಕ್ರೈಂ ಸಿಬ್ಬಂದಿ ದೊಡ್ಡಲಿಂಗಯ್ಯ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಸಿಗ್ನಲ್ ಬಳಿ ಪ್ರಾಣ ಪಣಕ್ಕಿಟ್ಟು ಖದೀಮನನ್ನು ರೋಚಕವಾಗಿ ಲಾಕ್ ಮಾಡಿದ್ದಾರೆ.

ಆರೋಪಿ ಪತ್ತೆ ಹೇಗೆ:-

 ಜೂ.20ರಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಟಗೆರೆ ಟೌನ್ ಡಿಸಿಸಿ ಬ್ಯಾಂಕ್ ಬಳಿ ಘಟನೆ ನಡೆದ ನಂತರ ಆರೋಪಿಯನ್ನು ಹಿಂಬಾಲಿಸಿ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿ ಆರೋಪಿಯು ದಾಬಸ್ ಪೇಟೆ, ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪಿದ್ದು, ಆರೋಪಿ ಪತ್ತೆಗಾಗಿ ಆರೋಪಿತನ ವಾಹನ ಸಂಖ್ಯೆಯನ್ನು ಅಲರ್ಟ್ ವಾರ್ನಿಂಗ್ ಸೆಂಟರ್ ಗೆ ನಮೂದಿಸಿದ್ದು, ಆರೋಪಿಯ ವಾಹನ ಸಂಖ್ಯೆ ಅಲರ್ಟ್ ಎಚ್ಚರಿಕೆ ಕೇಂದ್ರದ ಇಂಜಿನಿಯರ್ ಸಹಕಾರದೊಂದಿಗೆ ಅಲರ್ಟ್ ಎಚ್ಚರಿಕೆ ಕೇಂದ್ರಕ್ಕೆ ಪ್ರವೇಶಿಸಿದೆ. ಸುಮಾರು 01 ತಿಂಗಳಿನಿಂದ ಸದಾಶಿವನಗರ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ ಕಾದು ಕುಳಿತಿದ್ದ ಕೊರಟಗೆರೆ ಪೊಲೀಸ್ ಠಾಣೆಯ ಸಿಬ್ಬಂದಿ ದೊಡ್ಡಲಿಂಗಯ್ಯನವರಿಗೆ ಆ.6ರಂದು ಬೆಂಗಳೂರು ಕಮಾಂಡ್ ಸೆಂಟರ್ ರವರು ಮಾಹಿತಿ ಬಂದ‌ ಕೂಡಲೇ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ಬಂದು‌ ಆರೋಪಿಯನ್ನು ಹಿಡಿಯಲು ಪ್ರಯತ್ನ ಮಾಡುತ್ತಾರೆ. ದ್ವಿಚಕ್ರ ವಾಹನದಲ್ಲಿ ಬಂದ ಆಸಾಮಿ ವಾಹನ ನಿಲ್ಲಿಸಲಿಲ್ಲ. ಆದರೂ ಆತನನ್ನು ಬಿಡದೇ ಪಟ್ಟಾಗಿ ಹಿಡಿದಕೊಂಡಿದ್ದರು.

ನಂತರ ಸದಾಶಿವನಗರ ಸಂಚಾರ ಠಾಣೆ ಮಹಿಳಾ ಎಎಸ್‌ಐ ನಾಗಮ್ಮ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀಧರ್ ಅವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಯಿತು.

Leave a Reply

Your email address will not be published. Required fields are marked *

error: Content is protected !!