ರಾಜ್ಯದಲ್ಲಿ ವಿಮಾನಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ… ಈ ಹಿನ್ನೆಲೆ ವಿಮಾನ ನಿಲ್ದಾಣಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ.
ವಿದೇಶಗಳಿಗೆ ಹಾಗೂ ಬೇರೆ ರಾಜ್ಯಗಳಿಗೆ ಹೋಗಬೇಕೆಂದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ವಿಮಾನಗಳನ್ನೇ ಅವಲಂಬಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ.
ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಯಾದ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿ, ಒಟ್ಟು 9 ವಿಮಾನ ನಿಲ್ದಾಣಗಳಿವೆ. ಹಾಗಾದರೆ ಇವುಗಳಲ್ಲಿ ಎಷ್ಟು ರಾಷ್ಟ್ರೀಯ, ಎಷ್ಟು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ…? ಹಾಗೂ ಈ ವಿಮಾನ ನಿಲ್ದಾಣಗಳ ವಿಶೇಷತೆಗಳು ಏನು..? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿದೆ ನೋಡಿ….
ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದಲ್ಲಿ ಒಟ್ಟು 9 ವಿಮಾನ ನಿಲ್ದಾಣಗಳು ಇವೆ. ಇವುಗಳಲ್ಲಿ 2 ಅಂತಾರಾಷ್ಟ್ರೀಯ, 2 ದೇಶಿಯ ವಿಮಾನ ನಿಲ್ದಾಣಗಳನ್ನು ಒಳಗೊಂಡಿವೆ. ಹಾಗಾದರೆ ಈ ವಿಮಾನ ನಿಲ್ದಾಣಗಳ ವಿಶೇಷತೆ ಕುರಿತು ಮಾಹಿತಿಯನ್ನು ಗಮನಿಸಿ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿ…
ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿವೆ..?
1. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ, ಬೆಂಗಳೂರು
2. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಾಜಪೆ, ಮಂಗಳೂರು ಇವು ರಾಜ್ಯದಲ್ಲಿರುವ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಗಳಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದ ವಿಶೇಷತೆ ಏನು?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಾಜಧಾನಿ ಬೆಂಗಳೂರಿನ ಉತ್ತರಕ್ಕೆ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ದೇವನಹಳ್ಳಿಯಲ್ಲಿ ಈ ವಿಮಾನ ನಿಲ್ದಾಣ ಇದೆ. ಪ್ರತಿನಿತ್ಯ ಸಾವಿರಾರು ಅಂತಾರಾಷ್ಟ್ರೀಯ ಪ್ರಯಾಣಿಕರು ಇಲ್ಲಿಂದ ಪ್ರಯಾಣ ಮಾಡುತ್ತಾರೆ. ಈ ವಿಮಾನ ನಿಲ್ದಾಣದ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕೆಂಪೇಗೌಡ ವಿಮಾನ ನಿಲ್ದಾಣ ಆರಂಭವಾಗಿದ್ದು ಯಾವಾಗ? ಈ ವಿಮಾಣ ನಿಲ್ದಾಣ ನಿರ್ಮಾಣ ಆಗಿದ್ದು ಹೇಗೆ?
ಮೂಲತಃ ಬೆಂಗಳೂರಿನಲ್ಲಿ ಮೊದಲಿಗೆ ಇದ್ದಿದ್ದು, ಹೆಚ್ಎಎಲ್ ವಿಮಾನ ನಿಲ್ದಾಣ. ಇದನ್ನು 1942ರಲ್ಲಿ ಮಿಲಿಟರಿ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಸ್ಥಾಪನೆ ಮಾಡಲಾಯಿತು. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ದೇಶೀಯ ಕಾರ್ಯಾಚರಣೆಗಳನ್ನು ಇಲ್ಲಿ ಪ್ರಾರಂಭ ಮಾಡಲಾಯಿತು. ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದಂತೆ ವಿಮಾನ ನಿಲ್ದಾಣದ ಅವಶ್ಯಕತೆ ಹೆಚ್ಚಾಯಿತು. ಆದ್ದರಿಂದ ಮಾರ್ಚ್ 1991ರಲ್ಲಿ ಭಾರತೀಯ ರಾಷ್ಟ್ರೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧಾರ ಮಾಡಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ಹತ್ತಿರವಿರುವ ದೇವನಹಳ್ಳಿಯಲ್ಲಿ 4,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಿದ್ದೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವನ್ನು 2008ರ ಮೇ 24ರಂದು ಉದ್ಘಾಟನೆ ಮಾಡಲಾಯಿತು. ಇನ್ನು 2013ರ ಡಿಸೆಂಬರ್ 14ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಲಾಯಿತು. ಆಗಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಂತಲೇ ಹೆಸರುವಾಸಿಯಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದ ವಿಶೇಷತೆ ಹಾಗೂ ಯಾವೆಲ್ಲ ಸೌಲಭ್ಯಗಳನ್ನು ಒಳಗೊಂಡಿದೆ?
1. ಇದು ಕ್ಲೀನ್‌ಮ್ಯಾಕ್ಸ್ ಸೋಲಾರ್ ಅಭಿವೃದ್ಧಿಪಡಿಸಿದ ಕರ್ನಾಟಕದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವಾಗಿದೆ.
2. ಈ ವಿಮಾಣ ನಿಲ್ದಾಣವು ಎರಡು ಟರ್ಮಿಲ್ಗಳನ್ನು ಒಳಗೊಂಡಿದೆ.
3. ಟರ್ಮಿನಲ್-1 ವಾರ್ಷಿಕ 40ಮಿಲಿಯನ್ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ.
3. ಟರ್ಮಿನಲ್-2 ಏಷ್ಯಾದ ಗಾರ್ಡನ್ ಟರ್ಮಿನಲ್-2 ಆಗಿದೆ. 2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಟರ್ಮಿನಲ್ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂಪಾಯಿ ವೆಚ್ಚ ತಗುಲಿದೆ. ಇದು ವಾರ್ಷಿಕವಾಗಿ 5ರಿಂದ 6 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶೇಷತೆ ಏನು.?
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕರ್ನಾಟಕದ ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಇದೆ. ಇದು ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ನಗರದಿಂದ ಈಶಾನ್ಯಕ್ಕೆ ಸುಮಾರು 13 ಕಿಲೋ ಮೀಟರ್ ಬಜಪೆ ಸಮೀಪದಲ್ಲಿದೆ. ಈ ವಿಮಾನ ನಿಲ್ದಾಣವನ್ನು 1951ರ ಡಿಸೆಂಬರ್ 25 ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರು ಲೋಕಾರ್ಪಣೆ ಮಾಡಿದರು. ಈ ವಿಮಾನ ನಿಲ್ದಾಣ ಬೆಟ್ಟದ ಮೇಲಿದ್ದು, ಎರಡು ಟೇಬಲ್‌ಟಾಪ್ ರನ್‌ವೇಗಳನ್ನು ಹೊಂದಿದೆ. ಇದರ ಸಂಪೂರ್ಣ ವಿಶೇಷತೆ ಕುರಿತು ಇಲ್ಲಿ ತಿಳಿಯಿರಿ.
1. ಭಾರತದಲ್ಲಿ ಮೂರು ವಿಮಾನ ನಿಲ್ದಾಣಗಳು ಮಾತ್ರ ಟೇಬಲ್‌ಟಾಪ್ ರನ್‌ವೇಗಳನ್ನು ಹೊಂದಿವೆ. ಇದರಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಕೂಡ ಒಂದಾಗಿದೆ.
2. 2000ರ ದಶಕದ ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಇದರ ಟರ್ಮಿನಲ್ ಅನ್ನು ನವೀಕರಿಲಾಗಿದೆ.
3. 2006ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈಗೆ ಪ್ರಯಾಣ ಮಾಡುವ ಮೂಲಕ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಆರಂಭಿಸಿತು.
4. 28 ಸೆಪ್ಟೆಂಬರ್ 2012ರಂದು, ಏರ್ ಬಸ್ A310, ಮೊದಲ ಬಾರಿಗೆ ಇಲ್ಲಿ ಲ್ಯಾಂಡ್ ಆಗಿತ್ತು.
ದೇಶದದಲ್ಲಿನ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳಿಗೆ ಡೊಮೆಸ್ಟಿಕ್ ವಿಮಾನ ಎನ್ನುತ್ತಾರೆ. ಈ ವಿಮಾನಗಳು ಲ್ಯಾಂಡ್ ಆಗುವ ನಿಲ್ದಾಣಗಳನ್ನು ಡೊಮೆಸ್ಟಿಕ್ ವಿಮಾನ ನಿಲ್ದಾಣ ಎಂದು ಕರೆಯುತ್ತಾರೆ. ಈ ಡೊಮೆಸ್ಟಿಕ್ ವಿಮಾನಗಳು ಅಂತಾರಾಷ್ಟ್ರೀಯ ವಿಮಾನಲ್ದಾಣದಲ್ಲೂ ಕೂಡ ಲ್ಯಾಂಡ್ ಆಗುತ್ತವೆ.
ದೇಶಿಯ ವಿಮಾನ ನಿಲ್ದಾಣಗಳ ವಿವರ… ದೇಶಿಯ ವಿಮಾನ ನಿಲ್ದಾಣಗಳು ಯಾವುವು?
1. ಬೆಳಗಾವಿ ವಿಮಾನ ನಿಲ್ದಾಣ (ಸಾಂಬ್ರಾ)
2. ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣ
3. ಕಲಬುರಗಿ ವಿಮಾನ ನಿಲ್ದಾಣ
4. ಬೀದರ್ ವಿಮಾನ ನಿಲ್ದಾಣ
5. ಬಳ್ಳಾರಿ ವಿಮಾನ ನಿಲ್ದಾಣ
6. ಮೈಸೂರು ವಿಮಾನ ನಿಲ್ದಾಣ
7. ಶಿವಮೊಗ್ಗ ವಿಮಾನ ನಿಲ್ದಾಣ
ಬೆಳಗಾವಿ ವಿಮಾನ ನಿಲ್ದಾಣದ ವಿಶೇಷತೆಗಳು ಹಾಗೂ ಈ ವಿಮಾನ ನಿಲ್ದಾಣಕ್ಕಿರುವ ಮತ್ತೊಂದು ಹೆಸರೇನು?
ಈ ವಿಮಾನ ನಿಲ್ದಾಣವು ಬೆಳಗಾವಿ ನಗರದಿಂದ ಪೂರ್ವಕ್ಕೆ 10 ಕಿ.ಮೀ. ದೂರದ ಸಾಂಬ್ರಾ ನಗರದಲ್ಲಿದೆ. ಇದು ಸಾಂಬ್ರಾ ವಿಮಾನ ನಿಲ್ದಾಣ ಅಂತಲೂ ಹೆಸರುವಾಸಿಯಾಗಿದೆ. ಇದನ್ನು 14 ಸೆಪ್ಟೆಂಬರ್ 2017 ರಂದು ಲೋಕಾರ್ಪಣೆ ಮಾಡಲಾಯಿತು.
1. ಈ ವಿಮಾನ ನಿಲ್ದಾಣದ ಸಮೀಪ, ಭಾರತೀಯ ವಾಯುಪಡೆಯ ನಿಲ್ದಾಣ ಇದ್ದು, ವಾಯುಪಡೆಗೆ ಹೊಸದಾಗಿ ನೇಮಕಗೊಳ್ಳುವರು ಇಲ್ಲಿ ತರಬೇತಿಯನ್ನು ಪಡೆಯುತ್ತಾರೆ. ಹಾಗೆಯೇ ಈ ವಿಮಾಣ ನಿಲ್ದಾಣದಲ್ಲಿ ಒಂದು ಟರ್ಮಿನಲ್ ಇದೆ.
2. ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಯ ಭಾಗವಾಗಿ 14 ಸೆಪ್ಟೆಂಬರ್ 2017 ರಂದು ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಾಯಿತು. ಟರ್ಮಿನಲ್ ಕಟ್ಟಡವು 3,600 ಚದರ ಮೀಟರ್ ವಿಸ್ತೀರ್ಣದಲ್ಲಿದೆ. ಮತ್ತು 300ಕ್ಕೂ ಹೆಚ್ಚು ಪ್ರಯಾಣಿಕರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ವಾಯುಪಡೆ ನಿಲ್ದಾಣ ಕರ್ನಾಟಕದ ವಿಶೇಷ ಮೀಸಲು ಪಡೆ ಪೊಲೀಸರು 1948ರಲ್ಲಿ ವಾಯುನೆಲೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. 1961ರಲ್ಲಿ ಆಪರೇಷನ್ ವಿಜಯ್ ಸಮಯದಲ್ಲಿ ವಾಯುಪಡೆಯ ಕೇಂದ್ರವು ವಾಯು ಕಾರ್ಯಾಚರಣೆಯ ಪ್ರಮುಖ ನೆಲೆಯಾಗಿತ್ತು. ಎರಡು ವರ್ಷಗಳ ನಂತರ, ಜಾಲಹಳ್ಳಿಯ ತರಬೇತಿ ಶಾಲೆಯನ್ನು ಸ್ಥಳಾಂತರಿಸಲಾಯಿತು.
ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣವು ಯಾವೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ?
ಹುಬ್ಬಳ್ಳಿಯ ಗಾಂಧಿನಗರದಲ್ಲಿ ಹುಬ್ಬಳ್ಳಿ-ಧಾರವಾಡ ವಿಮಾನ ನಿಲ್ದಾಣವಿದೆ. ಇದು ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಕ್ಕೆ ಸೇರಿದ ಒಂದೇ ಒಂದು ವಿಮಾನ ನಿಲ್ದಾಣ ಆಗಿದೆ. ಇದು ನಗರದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ಇದೆ. ಇದು ದೇಶದಾದ್ಯಂತ 10 ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ
1. ಈ ವಿಮಾನ ನಿಲ್ದಾಣದಲ್ಲಿ ಒಂದು ಟರ್ಮಿನಲ್ ಇದೆ. ಇದರಲ್ಲಿ ಕಾರ್ಗೋ ಟರ್ಮಿನಲ್ ಕೂಡ ಇದೆ.
4. ಇಲ್ಲಿ ಡೊಮೆಸ್ಟಿಕ್ ಕಾರ್ಗೋ ಕಾಂಪ್ಲೆಕ್ಸ್ ಇದ್ದು, ಮಾರ್ಚ್ 2021ರಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಇದು ಉತ್ತರ ಕರ್ನಾಟಕದ ಮೊದಲ ಮೀಸಲಾದ ದೇಶೀಯ ಏರ್ ಕಾರ್ಗೋ ಟರ್ಮಿನಲ್ ಆಗಿದೆ.
ಕಲಬುರಗಿ ವಿಮಾನ ನಿಲ್ದಾಣದ ವಿಶೇಷತೆಗಳು ಹಾಗೂ
ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು?
ಕಲಬುರಗಿ ನಗರದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿ 10 ಪಕ್ಕ ಈ ವಿಮಾನ ನಿಲ್ದಾಣ ಇದೆ. ಈ ವಿಮಾಣ ನಿಲ್ದಾಣವನ್ನು ಸಂಪೂರ್ಣವಗಿ ಕರ್ನಾಟಕ ಸರ್ಕಾರ 742.23 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ಆಗಸ್ಟ್ 26, 2018ರಂದು ಈ ವಿಮಾನ ನಿಲ್ದಾಣ ಪ್ರಾಯೋಗಿಕವಾಗಿ ಹಾರಾಟ ನಡೆಸಿತು.
ಬೀದರ್ ವಿಮಾನ ನಿಲ್ದಾಣದ ವಿಶೇಷತೆಗಳು ಹಾಗೂ
ಈ ವಿಮಾನ ನಿಲ್ದಾಣ ಯಾವುದಕ್ಕೆ ಪ್ರಸಿದ್ಧಿ..?
ಈ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಯ, ಬೀದರ್ ವಾಯುನೆಲೆಯ ಸಿವಿಲ್ ಎನ್ಕ್ಲೇವ್ಗಾಗಿ ಕಾರ್ಯನಿರ್ವಹಿಸುತ್ತದೆ. ಬೀದರ್ ವಾಯುನೆಲೆ ಭಾರತದ ಅತ್ಯಂತ ಹಳೆಯ ಮಿಲಿಟರಿ ವಾಯುನೆಲೆಗಳಲ್ಲಿ ಒಂದಾಗಿದೆ. ಈ ವಾಯುಪಡೆಯಲ್ಲಿ ಪೈಲಟ್‌ಗಳಿಗೆ ತರಬೇತಿ ಶಾಲೆಯೂ ಇದೆ. ಬೀದರ್‌ನಲ್ಲಿ ನಾಗರಿಕ ವಿಮಾನ ನಿಲ್ದಾಣದ ದೀರ್ಘಾವಧಿಯ ಬೇಡಿಕೆ ಬಳಿಕ ಭಾರತೀಯ ವಾಯುಪಡೆಯು ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಿತ್ತು.
ಬಳ್ಳಾರಿ ವಿಮಾನ ನಿಲ್ದಾಣದ ವಿಶೇಷತೆಗಳು.. ಈ ವಿಮಾನ ನಿಲ್ದಾಣಕ್ಕಿರುವ ಮತ್ತೊಂದು ಹೆಸರೇನು?
ಇದನ್ನು ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವೆಂದೂ ಕರೆಯುಲಾಗುತ್ತದೆ. ಈ ವಿಮಾನ ನಿಲ್ದಾಣ ಬಳ್ಳಾರಿಯ ವಿದ್ಯಾನಗರದ ಟೌನ್‌ಶಿಪ್ ಬಳಿ ಇದೆ. ಆದರಿಂದ ಈ ವಿಮಾನ ನಿಲ್ದಾಣವನ್ನು ವಿದ್ಯಾನಗರ ವಿಮಾನ ನಿಲ್ದಾಣ ಅಂತಲೂ ಕರೆಯುತ್ತಾರೆ. ಇದು ವಿಮಾನ ಬಳ್ಳಾರಿಯಲ್ಲಿನ ತೋರಣಗಲ್ಲು ಪ್ರದೇಶದಲ್ಲಿರುವ ಜಿಂದಾಲ್ ಉಕ್ಕಿನ ಕಾರ್ಖಾನೆಯ ಖಾಸಗಿ ವಿಮಾನ ನಿಲ್ದಾಣವಾಗಿತ್ತು.
ಈ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್‌ನಿಂದ ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಜೆವಿಎಸ್ಎಲ್ 2005ರಲ್ಲಿ JSW ಸ್ಟೀಲ್ನಲ್ಲಿ ವಿಲೀನಗೊಂಡಿತ್ತು. 2004ರಲ್ಲಿ ಕರ್ನಾಟಕ ಸರ್ಕಾರ ಇದನ್ನು ಸ್ವಯತ್ತತೆ ಪಡೆದ ಮೇಲೆ 2006ರ ಡಿಸೆಂಬರ್ನಿಂದ ಸಾರ್ವಜನಿಕರ ಪ್ರಯಾಣ ಪ್ರಾರಂಭಿಸಿತು.
ಮೈಸೂರು ವಿಮಾನ ನಿಲ್ದಾಣದ ವಿಶೇಷತೆಗಳು…
ಮೈಸೂರು ವಿಮಾನ ನಿಲ್ದಾಣವನ್ನು, ಮಂಡಕಳ್ಳಿ ವಿಮಾನ ನಿಲ್ದಾಣ ಅಂತಲೂ ಕರೆಯುತ್ತಾರೆ. ಇದು ಮೈಸೂರಿನಲ್ಲಿರುವ ದೇಶೀಯ ವಿಮಾನ ನಿಲ್ದಾಣ ಆಗಿದೆ. ಇದು ನಗರದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಮಂಡಕಳ್ಳಿ ಗ್ರಾಮದ ಬಳಿ ಇದೆ. ಮತ್ತು ಇದು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಒಡೆತನದಲ್ಲಿ ಇದೆ. ಇದು 1940ರ ದಶಕದಲ್ಲಿ ಮೈಸೂರು ಸಾಮ್ರಾಜ್ಯದಿಂದ ನಿರ್ಮಿಸಲ್ಪಟ್ಟಿದ್ದು, ಒಂದು ಟರ್ಮಿನಲ್ ಅನ್ನು ಹೊಂದಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ವಿಶೇಷತೆ
2023ರ ಫೆಬ್ರವರಿ 27ರಂದು ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಆಯಿತು. ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕನಸಿನ ವಿಮಾನ ನಿಲ್ದಾಣವಾಗಿದೆ.
1. ಇದು ರಾಜ್ಯದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಡೆದಿಕೊಂಡಿದ್ದು, ಒಟ್ಟು 662.38 ಹೆಕ್ಟೇರ್ ವಿಸ್ತಿರ್ಣದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.
2. 449 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಮಾಣ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಇದು 3.2 ಕಿಲೋ ಮೀಟರ್ ರನ್ ವೇ ಹೊಂದಿದ್ದು, ಎಟಿಆರ್ ಸೇರಿದಂತೆ ಎಲ್ಲಾ ರೀತಿಯ ವಿಮಾನಗಳು ಲ್ಯಾಂಡಿಗ್ ಆಗಲಿವೆ.
3. 4320 ಚದರ ಅಡಿ ವಿಸ್ತಿರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್ ಹಾಗೂ ವಿಮಾನ ನಿಲ್ದಾಣದ ಸುತ್ತ 15,900 ಮೀಟರ್ ಉದ್ದದ ಕಾಂಪೌಂಡ್ ಅನ್ನು ನಿರ್ಮಾಣ ಮಾಡಲಾಗಿದೆ.
4. ಈ ವಿಮಾನ ನಿಲ್ದಾಣದ ನಿರ್ಮಾಣ ಒಟ್ಟು ವೆಚ್ಚ ಸುಮಾರು 600 ಕೋಟಿ ರೂ. ಆಗಿದೆ. ವಿಮಾನ ನಿಲ್ದಾಣದ ಮೂಲಸೌಕರ್ಯಕ್ಕಾಗಿ ಇದರಲ್ಲಿ 449 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಉಳಿದ ಮೊತ್ತವು ವಿಮಾನ ನಿಲ್ದಾಣದ ಭೂಸ್ವಾಧೀನಕ್ಕೆ ಬಳಕೆ ಮಾಡಲಾಗಿದೆ.
5. ಈ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಉದಾನ್ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕುವೆಂಪು ವಿಮಾನ ನಿಲ್ದಾಣವು ಕರ್ನಾಟಕದ ಎರಡನೇ ದೊಡ್ಡ ರನ್ ವೇ ಹೊಂದಿದೆ. ಇವುಗಳು ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳಾಗಿವೆ. ಇವುಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ವಿಜಯಪುರ ಮತ್ತು ಹಾಸನದಲ್ಲಿ ನೂತನ ವಿಮಾನ ನಿಲ್ದಾಣಗಳು ಕಾರ್ಯಾರಂಭ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗೆ ರಾಜ್ಯದಲ್ಲಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ವಿವರನ್ನು ನೀಡಲಾಗಿದೆ.