ಹವಾಮಾನ ವೈಪರೀತ್ಯದಿಂದ ಸೇವಂತಿಗೆ ಬೆಳೆದಿದ್ದ ರೈತನಿಗೆ ನಷ್ಟ: ಶ್ರಾವಣದಲ್ಲಿ ಉತ್ತಮ ಬೆಲೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಸಂಕಷ್ಟ

ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ನೆರೆ ಸೃಷ್ಟಿಯಾದರೆ, ಕೆಲವೊಂದು ಕಡೆ ಜಡಿ ಮಳೆಯಿಂದ ತೇವಾಂಶ ಹೆಚ್ಚಾಗಿ ಹೂ ಗಿಡಗಳಿಗೆ ರೋಗ ಕಾಟ ಸೇರಿದಂತೆ ಇತರೆ ಸಮಸ್ಯೆಗಳು ಶುರುವಾಗಿದೆ. ಶ್ರಾವಣದಲ್ಲಿ ಉತ್ತಮ ದರ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತರ ಕನಸನ್ನ ಊಜಿ ಸೇರಿದಂತೆ ಹಾನಿಕಾರಕ ಕೀಟಗಳು ಭಗ್ನಗೊಳಿಸಿವೆ.

ಹೌದು.. ತೇವಾಂಶ ಹೆಚ್ಚಾಗಿ ಸೇವಂತಿಗೆ ಹೂ ಗಿಡದ ಬುಡಗಳು ಕೊಳೆಯುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಗುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕಿ ಮಾಡಿದ ಸಾಲ ಎಲ್ಲಾ ತೀರಿಸಿಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಒಂದುಕಡೆ ಜಡಿ ಮಳೆ, ಮತ್ತೊಂದು ಕಡೆ ಆಷಾಢ ಗಾಳಿ, ಮಳೆ ಶಾಕ್ ಕೊಟ್ಟಿದೆ. ಕಳೆದ ಕೆಲ ದಿನಗಳಿಂದ ಬಿಟ್ಟೂಬಿಡದೆ ಬೀಳುತ್ತಿರುವ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಸೇವಂತಿಗೆ ಹೂ ಗಿಡಗಳ ಬುಡಗಳು ಕೊಳೆಯುತ್ತಿವೆ. ಜೊತೆಗೆ ಹೂವಿಗೆ ಕಪ್ಪು‌ರೋಗ ಬಂದು ಮಂಕುಬಡಿದಂತೆ ಆಗಿದೆ. ಹಾಗಾಗಿ ರೈತರು ಕಣ್ಣು ಮುಂದೆಯೇ ಹೂ ಗಿಡಗಳನ್ನು ಕಿತ್ತು ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನೇನು ಬೆಳೆದ ಬೆಳೆ ನಮ್ಮ ಕೈ ಸೇರುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತರ ಕನಸಿಗೆ ಕೀಟಗಳು ತಣ್ಣೀರು ಎರಚಿವೆ.

ಇನ್ನೂ ಹೂವಿನ ಬೆಳೆ ಬೆಳೆಯಲು ಕನಿಷ್ಠ ನಾಲ್ಕು ತಿಂಗಳು ಬೇಕು. ಮೊದಲ ಕಟಾವು ಮಾಡುವ ಹಂತಕ್ಕೆ ಬರುವ ವೇಳೆಗೆ ಸಾಕಷ್ಟು ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ. ಹೂ ಕಟಾವಿಗೆ ಬಂದ ನಂತರವೂ 10 ದಿನಕ್ಕೆ ಒಮ್ಮೆ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ. ಒಂದು ಬಾರಿ ಔಷಧಿ ಸಿಂಪಡಣೆ ಮಾಡಲು ಕನಿಷ್ಠ 10 ಸಾವಿರ ಆದರೂ ಬೇಕಾಗುತ್ತದೆ‌. ಹಾಗಾಗಿ ಉಳುಮೆಯಿಂದ ಕಟಾವಿನ ಹಂತಕ್ಕೆ ಬರುವ ವೇಳೆ ಲಕ್ಷಾಂತರ ರುಪಾಯಿ ಹಣವನ್ನ ಸಾಲ ಮಾಡಿರುತ್ತೇವೆ. ಉತ್ತಮ ಬೆಲೆ ಸಿಗುತ್ತದೆ ಎನ್ನುವಷ್ಟರಲ್ಲಿ ಈ ರೀತಿ ಆದರೆ ಹೇಗೆ ಎಂದು ತಾಲೂಕಿನ ರೈತ ವಾಸುದೇವ್ ಅವರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಉತ್ತಮ ಫಸಲು ಬಂದಾಗ ರೇಟ್ ಇರಲ್ಲ, ರೇಟ್ ಇದ್ದಾಗ ಫಸಲು ಇರಲ್ಲ, ಎರಡು ಇದ್ದಾಗ ಈ ರೀತಿ ಹವಾಮಾನ ವೈಪರೀತ್ಯಗಳಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇನ್ನಾದರು ಅಧಿಕಾರಿಗಳು ರೈತರ ತೋಟಗಳತ್ತ ಮುಖ ಮಾಡಿ ರೈತರ ಸಂಕಷ್ಟಕ್ಕೆ ಪರಿಹಾರ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!