ದೇವನಹಳ್ಳಿ: ಕರ್ನಾಟಕ ರಾಜ್ಯ ವ್ಯಾಪ್ತಿ ಅಲ್ಲದೆ ವಿಶ್ವ ವ್ಯಾಪ್ತಿಯಾಗಿ ಹಲವಾರು ಸಮಾಜಮುಖಿ ಸೇವೆಗಳು ಸಾರ್ವಜನಿಕ ಉಪಯೋಗಕರವಾದ ಮೂಲಭೂತ ಸೌಕರ್ಯಗಳನ್ನು ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಗುರುತಿಸಿ ಅನಿವಾಸಿ ಭಾರತೀಯರಾದ ಡಾ. ರೊನಾಲ್ಡ್ ಕೊಲಾಸೋ ವಿಶ್ವಖ್ಯಾತಿಯ “ಡಿಸ್ಟಿಂಗ್ವಿಶ್ಡ್” ಫೆಲೋಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬ್ರಿಟಿಷ್ ಪಾರ್ಲಿಮೆಂಟ್ ಹೌಸ್ ಆಫ್ ಲಂಡನ್ ನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಭಾರತ ಸಂವಿಧಾನದ ಸುಧಾರಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಂ .ಎನ್ ವೆಂಕಟಾಚಲಯ್ಯ ಅವರು ಸಹಿ ಮಾಡಿರುವ ವಿಶ್ವಖ್ಯಾತಿಯ” ಡಿಸ್ಟಿಂಗ್ವಿಶ್ಡ್” ಫೆಲೋಶಿಪ್ ಪ್ರಶಸ್ತಿ ಪತ್ರದ ಫಲಕವನ್ನು ಲಂಡನ್ ಲಾರ್ಡ್ ಮೇಯರ್ ಲಂಡನ್ ಡಿಜಿಟಲ್ ಆರ್ಥಿಕತೆಯ ಮಂತ್ರಿಗಳು, ಹಾಗೂ ಲೆಫ್ಟಿನೆಂಟ್ ಜನರಲ್ ಸುರೇಂದ್ರನಾಥ್, ಮೂವರು ಜಂಟಿಯಾಗಿ 20ಕ್ಕೂ ಹೆಚ್ಚು ಅಧಿಕ ದೇಶಗಳನ್ನು ಪ್ರತಿನಿಧಿಸುವ CEOಗಳು, ಗಣ್ಯಾತಿಗಣ್ಯರುಗಳ ಉಪಸ್ಥಿತಿಯಲ್ಲಿ ಇನ್ಸ್ ಟ್ಯೂಟ್ ಆಫ್ ಡೈರೆಕ್ಟರ್ಸ್ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಡಾ. ರೋನಾಲ್ಡ್ ಕೊಲಾಸೋ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸಂದೀಪ್ ಮಾತನಾಡಿ, ಡಾ. ರೊನಾಲ್ಡ್ ಕೊಲಾಸೋ ಅವರು ವಿಶ್ವಕ್ಕೆ ಮಾದರಿಯಾಗುವಂತಿರುವ ಪೊಲೀಸ್ ಠಾಣೆಗಳು, ಸರ್ಕಾರಿ ಹಾಗೂ ಚಾರಿಟಬಲ್ ಟ್ರಸ್ಟ್ ಗಳು ನಡೆಸುವ ಅತ್ಯಾಧುನಿಕ ಮಾದರಿಯ ಶಾಲೆಗಳು, ಸಾರ್ವಜನಿಕ ರಸ್ತೆಗಳು, ಆಸ್ಪತ್ರೆಗಳು, ತಾಲೂಕು ಆಫೀಸ್, ನ್ಯಾಯಾಂಗ, ವಕೀಲರ ಭವನ, ಹಾಫ್ ಕಾಮ್ಸ್ ಮಳಿಗೆಗಳು, ನಿರಾಶ್ರಿತರಿಗೆ ಸೂಕ್ತ ಮನೆಗಳ ಕೊಡುಗೆ, ಹಿಂದೂ ದೇವಾಲಯಗಳು, ಚರ್ಚ್ ಗಳು, ಮಸೀದಿಗಳು, ಬೆಸ್ಕಾಂ, ಸಾರ್ವಜನಿಕ ಸೌಲಭ್ಯಗಳು, ಪಂಚಾಯತಿ ಕಟ್ಟಡ, ಪೀಠೋಪಕರಣಗಳು, ಕೋವಿಡ್ ಸಮಯದಲ್ಲಿ ಸಂಕಟದಲ್ಲಿರುವ ಸಹಸ್ರಾರು ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಅನೇಕ ಹಳ್ಳಿಗಳಲ್ಲಿ ವಿತರಣೆ ಮಾಡಿ, ಪ್ರಕೃತಿ ವಿಕೋಪಕ್ಕೆ ತುತ್ತಾದವರೆಗೆ ಸಹಾಯ ಹಸ್ತ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಅಭಿವೃದ್ಧಿ ಹಾಗೂ ಜನಪರ ಸೇವೆಗಳನ್ನು ಗುರುತಿಸಿ ಅವರಿಗೆ ನೀಡಿದ ಗೌರವ ಇದಾಗಿದ್ದು, ಈ ವಿಶ್ವಖ್ಯಾತಿಯ ಗೌರವ ನಮ್ಮ ತಾಲೂಕು ರಾಜ್ಯ ಹಾಗೂ ನಮ್ಮ ದೇಶಕ್ಕೂ ಸಂದ ಗೌರವವಾಗಿರುತ್ತದೆ ಎಂದರು.